ದೇಶ

ದೆಹಲಿ: 5,400 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಸಮಾವೇಶ ಕೇಂದ್ರವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

Srinivas Rao BV

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನವದೆಹಲಿಯ ದ್ವಾರಕಾದಲ್ಲಿ 5,400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಮಾವೇಶ ಕೇಂದ್ರವನ್ನು ಇಂದು ಉದ್ಘಾಟಿಸಿದ್ದಾರೆ. 

ಅತ್ಯಾಧುನಿಕ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್ಪೋ ಸೆಂಟರ್ (IICC) -- 'ಯಶೋಭೂಮಿ'ಯನ್ನು 5,400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ಯೋಜನೆಯ ಪ್ರದೇಶ ಒಟ್ಟು 8.9 ಲಕ್ಷ ಸ್ಕ್ವೇರ್ ಮೀಟರ್ ಗಳಷ್ಟಿದ್ದು, 1.8 ಲಕ್ಷ ಸ್ಕ್ವೇರ್ ಮೀಟರ್ ಗಳಷ್ಟು ನಿರ್ಮಾಣ ಪ್ರದೇಶ ಹೊಂದಿರುವ ಯಶೋಭೂಮಿ ವಿಶ್ವದ ಅತಿದೊಡ್ಡ MICE (ಸಭೆಗಳು, ಸಮ್ಮೇಳನಗಳು ಮತ್ತು ಪ್ರದರ್ಶನಗಳು) ಸೌಲಭ್ಯಗಳನ್ನು ಹೊಂದಿರುವ ಕೇಂದ್ರಗಳ ಪೈಕಿ ಒಂದಾಗಿದೆ.

'ಯಶೋಭೂಮಿ' ಭವ್ಯವಾದ ಕನ್ವೆನ್ಷನ್ ಸೆಂಟರ್, ಬಹು ಪ್ರದರ್ಶನ ಸಭಾಂಗಣಗಳು ಮತ್ತು ಇತರ ಸೌಲಭ್ಯಗಳನ್ನು ಹೊಂದಿದೆ.

ಯಶೋಭೂಮಿಯಲ್ಲಿ 15 ಕನ್ವೆನ್ಷನ್ ಕೊಠಡಿಗಳಿದ್ದು,  ಮುಖ್ಯ ಸಭಾಂಗಣ, ಗ್ರ್ಯಾಂಡ್ ಬಾಲ್ ರೂಂ ಮತ್ತು  ಒಟ್ಟು 11,000 ಪ್ರತಿನಿಧಿಗಳಿಗೆ ಆಸನ ಕಲ್ಪಿಸುವ ಸಾಮರ್ಥ್ಯದ 13 ಸಭೆ ಕೊಠಡಿಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

ಕನ್ವೆನ್ಷನ್ ಸೆಂಟರ್ ದೇಶದಲ್ಲೇ ಅತಿ ದೊಡ್ಡ ಎಲ್ಇಡಿ ಮಾಧ್ಯಮದ ಮುಂಭಾಗವನ್ನು ಹೊಂದಿದೆ. ಕನ್ವೆನ್ಶನ್ ಸೆಂಟರ್‌ನಲ್ಲಿರುವ ಪ್ಲೀನರಿ ಹಾಲ್ ಸುಮಾರು 6,000 ಅತಿಥಿಗಳಿಗೆ ಆಸನ ಸಾಮರ್ಥ್ಯವನ್ನು ಹೊಂದಿದೆ.

ಸಭಾಂಗಣವು ನವೀನ ಸ್ವಯಂಚಾಲಿತ ಆಸನ ವ್ಯವಸ್ಥೆಯನ್ನು ಹೊಂದಿದೆ, ಇದು ಸಮತಟ್ಟಾದ ನೆಲವನ್ನು ವಿವಿಧ ಆಸನ ಸಂರಚನೆಗಳಿಗಾಗಿ ಆಡಿಟೋರಿಯಂ ಶೈಲಿಯ ಆಸನಗಳಾಗಿ ಪರಿವರ್ತಿಸುತ್ತದೆ.

ಗ್ರ್ಯಾಂಡ್ ಬಾಲ್ ರೂಂ ಸುಮಾರು 2,500 ಅತಿಥಿಗಳಿಗೆ ಆಸನ ವ್ಯವಸ್ಥೆ ಹೊಂದಿದ್ದು. ಇದು 500 ಜನರ ಆಸನ ಸಾಮರ್ಥ್ಯವನ್ನು ಹೊಂದಿರುವ ವಿಸ್ತೃತ ತೆರೆದ ಪ್ರದೇಶವನ್ನು ಸಹ ಹೊಂದಿದೆ. ಹೊಸ ಮೆಟ್ರೋ ಸ್ಟೇಷನ್ 'ಯಶೋಭೂಮಿ ದ್ವಾರಕಾ ಸೆಕ್ಟರ್ 25' ಉದ್ಘಾಟನೆಯೊಂದಿಗೆ 'ಯಶೋಭೂಮಿ' ದೆಹಲಿ ಏರ್‌ಪೋರ್ಟ್ ಮೆಟ್ರೋ ಎಕ್ಸ್‌ಪ್ರೆಸ್ ಲೈನ್‌ಗೆ ಸಂಪರ್ಕ ಕಲ್ಪಿಸುತ್ತದೆ.

SCROLL FOR NEXT