ದೇಶ

ದೆಹಲಿ ಮೆಟ್ರೋ ಕಾರ್ಯಕ್ರಮಕ್ಕೆ ಕೇಜ್ರಿವಾಲ್ ಗೆ ಆಹ್ವಾನಿಸದಿರುವುದು ಕೀಳು ಮನಸ್ಥಿತಿ ಪ್ರತಿಬಿಂಬಿಸುತ್ತದೆ: ಎಎಪಿ

Lingaraj Badiger

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಮೆಟ್ರೋದ ವಿಸ್ತರಿತ ಮಾರ್ಗ ಉದ್ಘಾಟಿಸಿದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಆಹ್ವಾನಿಸದ ಕೇಂದ್ರ ಸರ್ಕಾರದ ನಡೆಯನ್ನು ದೆಹಲಿ ಸಚಿವೆ ಅತಿಶಿ ಅವರು ಭಾನುವಾರ ಖಂಡಿಸಿದ್ದಾರೆ.

ದೆಹಲಿ ಮೆಟ್ರೋ ರೈಲು ನಿಗಮದ(ಡಿಎಂಆರ್‌ಸಿ) ಕಾರ್ಯಕ್ರಮಕ್ಕೆ ದೆಹಲಿ ಮುಖ್ಯಮಂತ್ರಿಯನ್ನು ಆಹ್ವಾನಿಸದಿರುವುದು "ಕೀಳು ಮನಸ್ಥಿತಿ"ಯನ್ನು ಪ್ರತಿಬಿಂಬಿಸುತ್ತದೆ. ಪ್ರಧಾನಿಯವರು ಪಕ್ಷವನ್ನು ಮೀರಿ ನಡೆದುಕೊಳ್ಳಬೇಕು ಎಂದು ಎಎಪಿ ನಾಯಕಿ ಹೇಳಿದ್ದಾರೆ.

ದ್ವಾರಕಾ ಸೆಕ್ಟರ್ 21 ನಿಲ್ದಾಣದಿಂದ ಯಶೋಭೂಮಿ ದ್ವಾರಕಾ ಸೆಕ್ಟರ್ 25 ನಿಲ್ದಾಣದವರೆಗೆ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಮೆಟ್ರೋ ಮಾರ್ಗದ ಸುಮಾರು 2 ಕಿಮೀ ವಿಸ್ತರಿತ ಮಾರ್ಗವನ್ನು ಪ್ರಧಾನಿ ಮೋದಿ ಇಂದು ಉದ್ಘಾಟಿಸಿದರು.

ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅತಿಶಿ, ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (ಡಿಎಂಆರ್‌ಸಿ) ಕೇಂದ್ರ ಮತ್ತು ದೆಹಲಿ ಸರ್ಕಾರದ 50:50 ಪಾಲುದಾರಿಕೆ ಉದ್ಯಮವಾಗಿದೆ ಎಂದು ತಿಳಿಸಿದರು.

"ಇದರರ್ಥ ಅರ್ಧದಷ್ಟು ಹಣವನ್ನು ದೆಹಲಿ ಸರ್ಕಾರ ಮತ್ತು ಉಳಿದ ಅರ್ಧವನ್ನು ಕೇಂದ್ರ ಖರ್ಚು ಮಾಡುತ್ತದೆ. ಹೀಗಾಗಿ ದೆಹಲಿ ಮುಖ್ಯಮಂತ್ರಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವುದು ಮುಖ್ಯವೆಂದು ಪರಿಗಣಿಸಬೇಕು. ನಾನು ಪ್ರಧಾನಿಗೆ ಹೇಳಲು ಬಯಸುತ್ತೇನೆ, ಅವರು ಎಲ್ಲರ ಪ್ರಧಾನಿಯಾಗಿದ್ದಾರೆ. ಪಕ್ಷದ ಪ್ರಧಾನಿಯಲ್ಲ. ಅವರು ಪಕ್ಷವನ್ನು ಮೀರಿ ನಡೆದುಕೊಳ್ಳಬೇಕು” ಎಂದಿದ್ದಾರೆ.

SCROLL FOR NEXT