ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ 
ದೇಶ

ಬಿಜೆಪಿ ಸೇರದಿದ್ದರೆ ಕ್ರಮ ಎದುರಿಸಬೇಕಾಗುತ್ತದೆ; ಟಿಎಂಸಿ ನಾಯಕರಿಗೆ ತನಿಖಾ ಸಂಸ್ಥೆಗಳಿಂದ ಬೆದರಿಕೆ: ಮಮತಾ ಬ್ಯಾನರ್ಜಿ

Ramyashree GN

ಪುರುಲಿಯಾ: ಟಿಎಂಸಿ ನಾಯಕರು ಬಿಜೆಪಿಗೆ ಸೇರಬೇಕು ಇಲ್ಲದಿದ್ದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಕೇಂದ್ರದ ತನಿಖಾ ಸಂಸ್ಥೆಗಳು ಬೆದರಿಕೆಯೊಡ್ಡುತ್ತಿವೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಆರೋಪಿಸಿದ್ದಾರೆ.

ಪುರುಲಿಯಾ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇ.ಡಿ, ಸಿಬಿಐ, ಎನ್‌ಐಎ ಮತ್ತು ಐಟಿ ಇಲಾಖೆಯಂತಹ ಏಜೆನ್ಸಿಗಳು ಬಿಜೆಪಿಯ 'ಅಸ್ತ್ರ'ಗಳಾಗಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.

ಟಿಎಂಸಿ ನಾಯಕರಿಗೆ ಕಿರುಕುಳ ನೀಡಲು ಎನ್‌ಐಎ, ಇ.ಡಿ ಮತ್ತು ಸಿಬಿಐನಂತಹ ತನಿಖಾ ಸಂಸ್ಥೆಗಳನ್ನು ಬಳಸಲಾಗುತ್ತಿದೆ. ಅವರು ಪೂರ್ವ ಮಾಹಿತಿಯಿಲ್ಲದೆ ದಾಳಿ ನಡೆಸುತ್ತಿದ್ದಾರೆ ಮತ್ತು ಮನೆಗಳಿಗೆ ನುಗ್ಗುತ್ತಿದ್ದಾರೆ. ಎಲ್ಲರೂ ಮಲಗಿರುವಾಗ ರಾತ್ರಿ ವೇಳೆಯಲ್ಲಿ ಮನೆಗೆ ಯಾರಾದರೂ ಪ್ರವೇಶಿಸಿದರೆ ಮಹಿಳೆಯರು ಏನು ಮಾಡುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ಭೂಪತಿನಗರದಲ್ಲಿ ಶನಿವಾರ ಎನ್‌ಐಎ ತಂಡವು ಸ್ಫೋಟ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲು ಹೋದಾಗ ಗುಂಪೊಂದು ದಾಳಿ ಮಾಡಿದ ಘಟನೆಯನ್ನು ಬ್ಯಾನರ್ಜಿ ಉಲ್ಲೇಖಿಸಿದರು.

'ನಮ್ಮ ನಾಯಕರು ಮತ್ತು ಕಾರ್ಯಕರ್ತರನ್ನು ಬಿಜೆಪಿಗೆ ಸೇರುವಂತೆ ತನಿಖಾ ಸಂಸ್ಥೆಗಳು ಕೇಳುತ್ತಿವೆ' ಎಂದು ಅವರು ಆರೋಪಿಸಿದ್ದಾರೆ.

ಯಾವುದೇ ಪ್ರಚೋದನೆಗೆ ಬೀಳಬೇಡಿ ಎಂದು ಜನರನ್ನು ಕೇಳಿಕೊಂಡ ಬ್ಯಾನರ್ಜಿ, ರಾಮನವಮಿ ಸಂದರ್ಭದಲ್ಲಿ ಬಿಜೆಪಿ ಕೋಮು ಭಾವನೆಗಳನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸಿದರು.

ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಎಂಜಿಎನ್‌ಆರ್‌ಇಜಿಎ ಮತ್ತು ಪಿಎಂ-ಆವಾಸ್ ಯೋಜನೆಗಳಿಗೆ ಪಶ್ಚಿಮ ಬಂಗಾಳದ ಹಣವನ್ನು ಕಸಿದುಕೊಳ್ಳುತ್ತಿದೆ. ರಾಜ್ಯ ಸರ್ಕಾರವು ಬಡವರಿಗೆ ಮನೆ ನಿರ್ಮಿಸಲು 1.2 ಲಕ್ಷ ರೂ. ನೀಡುತ್ತಿದೆ. ಈಗ ಹಣ ನೀಡಲು ಚುನಾವಣಾ ಆಯೋಗವು ಅನುಮತಿ ನೀಡುವುದಿಲ್ಲ, ಚುನಾವಣೆ ನಂತರ ಬಡವರ ಮನೆಗಳನ್ನು ನಿರ್ಮಿಸಿಕೊಡುತ್ತೇವೆ ಎಂದು ಹೇಳಿದರು.

SCROLL FOR NEXT