ನೀಲಗಿರಿ: ಊಟಿ ಎಂದರೆ ನೆನಪಾಗುವುದು ಪ್ರಕೃತಿ ಸೌಂದರ್ಯ ಮತ್ತು ಚಳಿ. ಕಳೆದ ಡಿಸೆಂಬರ್‌ನಲ್ಲಿ ಊಟಿಯಲ್ಲಿ ತಾಪಮಾನವು 0 ಡಿಗ್ರಿ ಸೆಲ್ಸಿಯಸ್‌ಗೆ ಇಳಿದ ಐದು ತಿಂಗಳ ನಂತರ, ಈ ಬೇಸಿಗೆಯಲ್ಲಿ 29 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಮೊನ್ನೆ ಭಾನುವಾರ ಮತ್ತು ನಿನ್ನೆ ಸೋಮವಾರದಂದು ಗಿರಿಧಾಮವು ಕಳೆದ 73 ವರ್ಷಗಳಲ್ಲಿ ಅತ್ಯಂತ ಹೆಚ್ಚು ತಾಪಮಾನ ದಾಖಲಿಸಿದೆ. ಉಳಿದ ಕಡೆಗಳಲ್ಲಿ ಈಗ 35 ಡಿಗ್ರಿಗಿಂತ ಅಧಿಕ ತಾಪಮಾನವಿರುವುದರಿಂದ ಊಟಿಗೆ ಈ ಬೇಸಿಗೆಯಲ್ಲಿ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕಡಿಮೆಯೇನು ಆಗಿಲ್ಲ.
ಈ ತಾಪಮಾನ ಏರಿಕೆಯು ಊಟಿಗೆ ಅಥವಾ ತಮಿಳುನಾಡಿಗೆ ಸೀಮಿತವಾಗಿಲ್ಲ. ದೇಶಾದ್ಯಂತ ಈ ಬೇಸಿಗೆಯಲ್ಲಿ ಬಿಸಿಲು ಹೆಚ್ಚಾಗಿದೆ ಎಂದು ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರದ ಎಸ್ ಬಾಲಚಂದ್ರನ್ ಟಿಎನ್‌ಐಇಗೆ ತಿಳಿಸಿದರು. ಸೋಮವಾರ, ಈರೋಡ್‌ನಲ್ಲಿ ತಮಿಳು ನಾಡಿನಲ್ಲಿಯೇ ಅತ್ಯಧಿಕ 42.6 ° ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಲಾಗಿದೆ, ನಂತರ ತಿರುಪತ್ತೂರಿನಲ್ಲಿ 42 ° ಸೆಲ್ಸಿಯಸ್ ದಾಖಲಾಗಿದೆ. ಸೇಲಂ (41.6 ° ಸೆಲ್ಸಿಯಸ್), ವೆಲ್ಲೂರು (41.5 ° ಸೆಲ್ಸಿಯಸ್) ಮತ್ತು ಕರೂರ್ ಪರಮತಿ (41 ° ಸೆಲ್ಸಿಯಸ್) ಜಿಲ್ಲೆಗಳು ಕೂಡ ಈ ವರ್ಷ ಹೆಚ್ಚಿನ ತಾಪಮಾನ ಕಂಡಿವೆ.
ಎಲ್ ನಿನೋ ಹಂತವು ಸಮೀಪಿಸುತ್ತಿರುವಂತೆಯೇ ತಾಪಮಾನ ಏರಿಕೆ ಕಂಡಿದೆ ಎಂದು ಬಾಲಚಂದ್ರನ್ ಹೇಳುತ್ತಾರೆ. ತಾಪಮಾನದಲ್ಲಿನ ಒಟ್ಟಾರೆ ಏರಿಕೆಯು ಹೆಚ್ಚು ಮರಗಳನ್ನು ನೆಡುವ ಮೂಲಕ ಮತ್ತು ಅರಣ್ಯನಾಶವನ್ನು ತಡೆಗಟ್ಟುವ ಮೂಲಕ ಪರಿಸರವನ್ನು ರಕ್ಷಿಸುವ ಪ್ರಾಮುಖ್ಯತೆಯನ್ನು ಸಾರುತ್ತಿದೆ ಎಂದು ಹೇಳಿದರು.
ಹವಾಮಾನ ಬದಲಾವಣೆ: ಊಟಿಯಲ್ಲಿ ಪ್ರವಾಸಿಗರು ಹರಿದು ಬರುತ್ತಿದ್ದರೂ ಸಹ, ಕಾರ್ಮಿಕರು, ತೋಟ ಮತ್ತು ಕೃಷಿ ಕಾರ್ಮಿಕರು, ಅಸಾಮಾನ್ಯ ಶಾಖದಿಂದ ಬಳಲುತ್ತಿದ್ದಾರೆ. ನೀಲಗಿರಿ ಪರಿಸರ ಸಾಮಾಜಿಕ ಟ್ರಸ್ಟ್‌ನ ವಿ ಶಿವದಾಸ್, ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಜನರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಕೊಡೆಯ ಮೊರೆ ಹೋಗುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ ಎಂದರು.
ಊಟಿಯಲ್ಲಿ ಎಳನೀರು ಭಾರೀ ದುಬಾರಿಯಾಗಿರುವುದರಿಂದ ಬಾರ್ಲಿ, ಸಬ್ಜಾ ಅಥವಾ ತುಳಸಿ ನೀರನ್ನು ಕುಡಿಯಲು ಮತ್ತು ಪೇರಳೆಗಳನ್ನು ತಿನ್ನಲು ನಾವು ಜನರಿಗೆ ಹೇಳುತ್ತಿದ್ದೇವೆ ಎಂದರು.
ಪೂವುಳಗಿನ್ ನನ್ಬರ್ಗಲ್‌ನ ಸಂಸ್ಥಾಪಕ ಮತ್ತು ತಮಿಳುನಾಡು ಹವಾಮಾನ ಬದಲಾವಣೆ ಮಿಷನ್‌ನ ಆಡಳಿತ ಮಂಡಳಿಯ ಸದಸ್ಯರಾದ 'ಪೂವುಲಗು' ಸುಂದರರಾಜನ್, ಇದು ಊಟಿ ನಿವಾಸಿಗಳು ಮತ್ತು ತಮಿಳುನಾಡಿನ ಉಳಿದವರು ಬಿಸಿಗಾಳಿ ಸೂಚನೆಗಳನ್ನು ಅನುಸರಿಸುವ ಮೂಲಕ ಹೊಸ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆಯನ್ನು ಸೂಚಿಸುತ್ತದೆ ಎಂದರು. ಅನಾರೋಗ್ಯ ಮತ್ತು ಜನರ ಮರಣವನ್ನು ತಡೆಗಟ್ಟಲು ಆರೋಗ್ಯ ಇಲಾಖೆಯು ಎಚ್ಚರಿಕೆ ಹೊರಡಿಸಿದೆ.
ಹವಾಮಾನ ಬದಲಾವಣೆಯಿಂದಾಗಿ ತಾಪಮಾನ ಏರಿಕೆಯಾಗಿದೆ. ಬೇಸಿಗೆಯ ತಿಂಗಳುಗಳಲ್ಲಿ ಮಾನವ ಸಾವುಗಳನ್ನು ಪರೀಕ್ಷಿಸಲು ಮತ್ತು ಶವಪರೀಕ್ಷೆ ವರದಿಗಳನ್ನು ಪರಿಶೀಲಿಸುವ ಮೂಲಕ ಶಾಖದ ಹೊಡೆತದ ಸಾವಿನ ಸಂಖ್ಯೆಯನ್ನು ಘೋಷಿಸಲು ನಾವು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಸುಂದರರಾಜನ್ ಹೇಳಿದರು.
ನೀಲಗಿರಿಗೆ ಇ-ಪಾಸ್: ಬೇಸಿಗೆಯಲ್ಲಿ ನೀಲಗಿರಿ ಮತ್ತು ಕೊಡೈಕೆನಾಲ್‌ಗೆ ತೆರಳುವ ಪ್ರವಾಸಿ ವಾಹನಗಳಿಗೆ ಈ ಪ್ರದೇಶದಲ್ಲಿ ಸಂಚಾರ ನಿಯಂತ್ರಿಸಲು ಇ-ಪಾಸ್ ವ್ಯವಸ್ಥೆಯನ್ನು ಪರಿಚಯಿಸುವಂತೆ ಮದ್ರಾಸ್ ಹೈಕೋರ್ಟ್ ತಮಿಳು ನಾಡು ಸರ್ಕಾರಕ್ಕೆ ಆದೇಶಿಸಿದೆ.