ನವದೆಹಲಿ: ಲೋಕಸಭೆ ಕಲಾಪ ನಿನ್ನೆ ಶುಕ್ರವಾರ ಮುಂದೂಡಲ್ಪಟ್ಟ ನಂತರ ಸಂಸತ್ ಸಂಕೀರ್ಣದಲ್ಲಿ ನಿನ್ನೆ ಶುಕ್ರವಾರ ಸಾಯಂಕಾಲ ನಡೆದ ಅನೌಪಚಾರಿಕ ಚಹಾ ಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿ ಪರಸ್ಪರರನ್ನು ಆತ್ಮೀಯವಾಗಿ ಸ್ವಾಗತಿಸಿದ್ದು ಕಂಡುಬಂತು.
ಸಂಸತ್ತಿನ ಬಜೆಟ್ ಅಧಿವೇಶನ ನಿಗದಿತ ಅಂತ್ಯಕ್ಕೆ ಒಂದು ದಿನ ಮುಂಚಿತವಾಗಿ ಮುಂದೂಡಲ್ಪಟ್ಟಿದೆ. ಸಂಸತ್ತಿನ ಪ್ರಸ್ತುತ ಅಧಿವೇಶನವು ಆಗಸ್ಟ್ 12 ರಂದು ಕೊನೆಗೊಳ್ಳಬೇಕಿತ್ತು. ಆದರೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಅದೇ ರೀತಿ ರಾಜ್ಯಸಭೆ ಅಧಿವೇಶನ ಕೂಡ ಮುಂದೂಡಲ್ಪಟ್ಟಿದೆ.
ಸಾಂಪ್ರದಾಯಿಕವಾಗಿ, ಎರಡೂ ಸದನಗಳನ್ನು ಮುಂದೂಡಿದ ನಂತರ, ಲೋಕಸಭಾ ಸ್ಪೀಕರ್ ಎಲ್ಲಾ ರಾಜಕೀಯ ಪಕ್ಷಗಳ ಸದಸ್ಯರನ್ನು ಸಾಂಪ್ರದಾಯಿಕ ಚಹಾ ಕೂಟಕ್ಕೆ ಆಹ್ವಾನಿಸುತ್ತಾರೆ. ಆಡಳಿತ ಪಕ್ಷ ಮತ್ತು ವಿಪಕ್ಷ ನಾಯಕರು ಪರಸ್ಪರ ನಗುತ್ತಾ ಆತ್ಮೀಯವಾಗಿ ಸ್ವಾಗತಿಸಿಕೊಂಡರು.
ಪ್ರಧಾನಿಯವರು ಕುಳಿತ ಸೋಫಾ ಪಕ್ಕದಲ್ಲಿ ಸ್ಪೀಕರ್ ಓಂ ಬಿರ್ಲಾ ಇದ್ದರು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಯವರ ಬಲಭಾಗದ ಕುರ್ಚಿಯಲ್ಲಿದ್ದರು.
ಸಚಿವರಾದ ಕಿರಣ್ ರಿಜಿಜು, ಕಿಂಜರಾಪು ರಾಮಮೋಹನ್ ನಾಯ್ಡು, ಚಿರಾಗ್ ಪಾಸ್ವಾನ್, ಪಿಯೂಷ್ ಗೋಯಲ್ ಮತ್ತು ವಿರೋಧ ಪಕ್ಷದ ಸಂಸದರಾದ ಸುದೀಪ್ ಬಂಡೋಪಾಧ್ಯಾಯ, ಕನಿಮೋಳಿ ಅವರು ರಾಹುಲ್ ಗಾಂಧಿಯವರ ಸಾಲಿನಲ್ಲಿ ಕುಳಿತಿದ್ದರು. ಪ್ರಧಾನಿಯವರ ಎಡಭಾಗದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಹಾಜರಿದ್ದರು.
ಶಾಂತವಾಗಿ ಸಾಗಿದ ಚಹಾ ಕೂಟದಲ್ಲಿ ರಾಹುಲ್ ಗಾಂಧಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ ಉಕ್ರೇನ್ ಪರಿಸ್ಥಿತಿಯ ಬಗ್ಗೆ ವಿಚಾರಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಈ ಪ್ರದೇಶದಲ್ಲಿನ ಬೆಳವಣಿಗೆಗಳನ್ನು ಭಾರತವು ನಿಕಟವಾಗಿ ಗಮನಿಸುತ್ತಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಮುಖಂಡರು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದಂತೆ ಸರ್ವರ್ ಟೀ ಟ್ರೇಯನ್ನು ಹಿಡಿದುಕೊಂಡು ಬಂದರು.
ಕೆಲವು ವಾರಗಳ ಹಿಂದೆ, ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ತೀಕ್ಷ್ಣವಾದ ಮಾತುಗಳನ್ನು ವಿನಿಮಯ ಮಾಡಿಕೊಂಡಿದ್ದರು. ನಿನ್ನೆ ಸಾಯಂಕಾಲ ಪರಸ್ಪರ ಎದುರಿಗೆ ಕುಳಿತಿರುವ ನಾಯಕರ ಚಿತ್ರಣವು ಬಿರುಸಿನ ಚುನಾವಣಾ ಪ್ರಚಾರ ಮತ್ತು ಎರಡು ಪ್ರತಿಸ್ಪರ್ಧಿ ಪಕ್ಷಗಳ ನಡುವೆ ನಡೆಯುತ್ತಿರುವ ಕಹಿ ಯುದ್ದಕ್ಕೆ ವ್ಯತಿರಿಕ್ತವಾಗಿತ್ತು.
ಬಜೆಟ್ ಅಧಿವೇಶನ: ಅಧಿವೇಶನದಲ್ಲಿ, ಸಂಸತ್ತು ಹಣಕಾಸು ಮಸೂದೆ, 2024 ಮತ್ತು ವಿನಿಯೋಗ ಮಸೂದೆ, 2024 ಸೇರಿದಂತೆ ಹಲವಾರು ಮಹತ್ವದ ಶಾಸನಗಳನ್ನು ಅಂಗೀಕರಿಸಲಾಯಿತು. ಇವೆರಡೂ ಎರಡೂ ಕೇಂದ್ರ ಬಜೆಟ್‌ಗೆ ನಿರ್ಣಾಯಕವಾಗಿದೆ. ಜಮ್ಮು ಮತ್ತು ಕಾಶ್ಮೀರ ವಿನಿಯೋಗ ಮಸೂದೆ, 2024 ಮತ್ತು ಇಂಡಿಯನ್ ಏರ್‌ಕ್ರಾಫ್ಟ್ ಬಿಲ್, 2024 ಸಹ ಅಂಗೀಕರಿಸಲ್ಪಟ್ಟ ನಾಲ್ಕು ಮಸೂದೆಗಳಲ್ಲಿ ಸೇರಿವೆ.
ಇದಲ್ಲದೆ, ಅಧಿವೇಶನದ ಹೆಚ್ಚು ವಿವಾದಾತ್ಮಕ ಕ್ಷಣಗಳಲ್ಲಿ ಒಂದಾದ ವಕ್ಫ್ ಕಾಯಿದೆ, 1995 ತಿದ್ದುಪಡಿ. ಮಸೂದೆಯನ್ನು ಅಂತಿಮವಾಗಿ ಹೆಚ್ಚಿನ ಪರಿಶೀಲನೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಉಲ್ಲೇಖಿಸಲಾಯಿತು.