ಸಾಂದರ್ಭಿಕ ಚಿತ್ರ 
ದೇಶ

ಗುಜರಾತ್ ಟೀಚಿಂಗ್ ಹಗರಣ: ಅಮೆರಿಕ, ಕೆನಡಾದಲ್ಲಿ ಶಿಕ್ಷಕರು; ಶಾಲೆಯಿಂದ ಪ್ರತಿ ತಿಂಗಳೂ ಸಂಬಳ ಅವರ ಖಾತೆಗೆ ಜಮೆ!

ಇಂತಹ ಕೆಲವು ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಇದರಲ್ಲಿ ಅಸಲಿ ಶಿಕ್ಷಕರ ಬದಲಿಗೆ ನಕಲಿ ಶಿಕ್ಷಕರು ಸೇವೆ ಸಲ್ಲಿಸುತ್ತಿರುವುದು ಕಂಡುಬಂದಿದೆ.

ಅಹಮದಾಬಾದ್: ಅಮೆರಿಕದಲ್ಲಿ ವಾಸಿಸುತ್ತಿರುವ ಗುಜರಾತ್ ಮೂಲದ ಭಾವನಾ ಪಟೇಲ್ ಅವರು ಸರ್ಕಾರಿ ದಾಖಲೆಗಳ ಪ್ರಕಾರ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ. ಆದರೆ ಅವರು ಶಾಲೆಯಲ್ಲಿ ಪಾಠ ಮಾಡದಿದ್ದರೂ ಕರ್ತವ್ಯಕ್ಕೆ ಹಾಜರಾಗದಿದ್ದರೂ ಪ್ರತಿ ತಿಂಗಳೂ ಅವರ ಖಾತೆಗೆ ಸಂಬಳ ಜಮೆಯಾಗುತ್ತಿದೆ. ಇಂತಹ ಕೆಲವು ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಇದರಲ್ಲಿ ಅಸಲಿ ಶಿಕ್ಷಕರ ಬದಲಿಗೆ ನಕಲಿ ಶಿಕ್ಷಕರು ಸೇವೆ ಸಲ್ಲಿಸುತ್ತಿರುವುದು ಕಂಡುಬಂದಿದೆ.

ದಾಖಲೆಗಳ ಪ್ರಕಾರ ಭಾವನಾ ಪಟೇಲ್ ಅವರು ಬನಸ್ಕಾಂತ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ದಂಟ ತಾಲೂಕಿನ ಪಂಚಾ ಗ್ರಾಮದವರು. ಕಳೆದ 8 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿರುವ ಅವರು ವರ್ಷಕ್ಕೊಮ್ಮೆ ದೀಪಾವಳಿ ಸಂದರ್ಭದಲ್ಲಿ ತಮ್ಮ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಕೆಲವು ದಿನಗಳ ಕಾಲ ಭಾರತದಲ್ಲೇ ಉಳಿಯುತ್ತಾರೆ. ಈ ವೇಳೆ ಶಾಲೆಗಳಿಗೆ ರಜೆ ಇರುತ್ತದೆ. ಹೀಗಾಗಿ ಶಾಲೆಗೆ ಹೋಗೋದಿಲ್ಲ. ಮಕ್ಕಳ ಜೊತೆ ಚರ್ಚಿಸಿ ಪಾಠ ಕೂಡಾ ಮಾಡೋದಿಲ್ಲ.

ಶಿಕ್ಷಕಿ ಭಾವನಾ ಪಟೇಲ್ ಅವರ ಗೈರು ಹಾಜರಿ ಕುರಿತಾಗಿ ಶಾಲೆಯ ಹಂಗಾಮಿ ಪ್ರಾಂಶುಪಾಲರು, ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿ, ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಚಿವರಿಗೆ ಲಿಖಿತವಾಗಿ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಇದಕ್ಕೆ ಸ್ಪಂದಿಸಿದ ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿ ಸೂಕ್ತ ಕ್ರಮಕ್ಕೆ ಆದೇಶಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಣ ಖಾತೆ ರಾಜ್ಯ ಸಚಿವ ಪ್ರಫುಲ್ಲ ಪನ್ಸೇರಿಯಾ ಅವರು, ವಿದೇಶದಲ್ಲಿ ನೆಲೆಸಿರುವ ಶಿಕ್ಷಕರಿಗೆ 2024ರ ಜನವರಿ 1ರಿಂದ ವೇತನ ಪಾವತಿಯಾಗಿಲ್ಲ. ಶಿಕ್ಷಕರು ಮಧ್ಯಂತರ ರಜೆಯಲ್ಲಿದ್ದಾರೆ. ಪರಿಸ್ಥಿತಿ ಅವಲೋಕಿಸಿ ಸೂಕ್ತ ಕ್ರಮಕೈಗೊಳ್ಳಲು ವಿಚಾರಣೆ ನಡೆಸಲಾಗುವುದು ಎಂದರು.

ರಾಜ್ಯ ಸರ್ಕಾರದ ವಕ್ತಾರ ಸಚಿವ ರಿಷಿಕೇಶ್ ಪಟೇಲ್ ಮಾತನಾಡಿ, "ನಾವು ಸಂಪೂರ್ಣ ತನಿಖೆ ನಡೆಸುತ್ತೇವೆ, ಪಾಸ್‌ಪೋರ್ಟ್ ಕಚೇರಿ ದಾಖಲೆಗಳಿಂದ ಹಿಡಿದು ಹಾಜರಾತಿ ಶೀಟ್‌ಗಳವರೆಗೆ ಎಲ್ಲವನ್ನೂ ಪರಿಶೀಲಿಸುತ್ತೇವೆ. ಈ ವಿಷಯವು ಸಂಪೂರ್ಣ ಪಾರದರ್ಶಕವಾಗಿರುತ್ತದೆ ಮತ್ತು ಸಮಗ್ರ ತನಿಖೆ ನಡೆಸಲಾಗುವುದು" ಎಂದರು.

ದಂಟ ತಾಲೂಕಿನಲ್ಲಿ ಪ್ರಕರಣ ಬಹಿರಂಗವಾದ ಬೆನ್ನಲ್ಲೇ ಕಪಾಡ್ವಂಜ್ ಮತ್ತು ವಾವ್ ತಾಲೂಕಿನಲ್ಲಿ ಮತ್ತೆ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ.

ಕಪಾಡ್ವಂಜ್‌ನ ವಾಟಾ ಶಿವಪುರ ಪ್ರಾಥಮಿಕ ಶಾಲೆಯ ಶಿಕ್ಷಕ ಆಶಿಶ್ ಪಟೇಲ್ ಮತ್ತು ವಾವ್‌ನ ಉಚ್ಪಾ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕ ದರ್ಶನ್ ಪಟೇಲ್ ಇಬ್ಬರೂ ದೀರ್ಘಕಾಲದಿಂದ ಕರ್ತವ್ಯ ಗೈರುಹಾಜರಾಗಿದ್ದಾರೆ.

ಇಬ್ಬರೂ ತಮ್ಮ ಮಾಸಿಕ ಸಂಬಳವನ್ನು ತೆಗೆದುಕೊಳ್ಳುತ್ತಿದ್ದಾರೆ. ಆಶಿಶ್ ಪಟೇಲ್ ಬದಲಿಗೆ ವಿಜಯ್ ಎಂಬ ಮತ್ತೊಬ್ಬ ಟೀಚರ್ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಮಾಧ್ಯಮದವರು ಶಾಲೆಗೆ ಭೇಟಿ ನೀಡಿದಾಗ ವಿಜಯ್ ಸ್ಥಳದಿಂದ ಪರಾರಿಯಾಗಿದ್ದಾರೆ. ಶಾಲೆಯ ಪ್ರಾಂಶುಪಾಲ ಅರ್ಜನ್ ರಾಥೋಡ್ ಅವರು ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ವಿಷಯ ತಿಳಿದ ಕಪಡವಂಜ್ ತಾಲೂಕಾ ಅಭಿವೃದ್ಧಿ ಅಧಿಕಾರಿ ಮಹಿಪತ್ ಚೌಹಾಣ್ ಅವರು ಕೂಲಂಕುಷವಾಗಿ ತನಿಖೆ ನಡೆಸಿ ಸೂಕ್ತ ಕ್ರಮಕ್ಕೆ ಆದೇಶಿಸಿದ್ದಾರೆ.

ವಾವ್ ತಾಲೂಕಿನ ಉಚ್ಪಾ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕ ದರ್ಶನ್ ಪಟೇಲ್ ಕಳೆದ ಎರಡು ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದಾರೆ. ಆದರೂ ಅವರು ಪ್ರತಿ ತಿಂಗಳು ವೇತನ ಪಡೆಯುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿಗಳ ಬೆಂಬಲದಿಂದ ಪಟೇಲ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.

ಪಟೇಲ್ ಅವರು ನವೆಂಬರ್ 10, 2022 ರಿಂದ ಅಧಿಕೃತ ರಜೆ ಇಲ್ಲದೆ ಗೈರುಹಾಜರಾಗಿದ್ದಾರೆ ಎಂದು ಉಚ್ಪಾ ಪ್ರಾಥಮಿಕ ಶಾಲೆಯ ಪ್ರಾಂಶುಪಾಲ ಬಿ ಬಿ ಬರೋಟ್ ದೃಢಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ