ದೆಹಲಿ: ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಗುರುವಾರದಂದು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಿದ್ದು, ದೇಶಕ್ಕಾಗಿ ಮಡಿದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಯೋಧರಿಗೆ ನಮನ ಸಲ್ಲಿಸಿದ್ದಾರೆ.
ಇದೇ ವೇಳೆ ದೆಹಲಿ ಸಿಎಂ ಕೇಜ್ರಿವಾಲ್ ಅವರನ್ನು ಆಧುನಿಕ ಸ್ವಾತಂತ್ರ್ಯ ಹೋರಾಟಗಾರ ಎಂದು ಗೆಹ್ಲೋಟ್ ಹೇಳಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
78 ನೇ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು. ಈ ಸ್ವಾತಂತ್ರ್ಯವನ್ನು ಪಡೆಯುವುದಕ್ಕೆ ಹಲವು ತ್ಯಾಗ, ಬಲಿದಾನಗಳಾಗಿವೆ. ಈ ತ್ಯಾಗ ಮಾಡಿದವರಿಗೆ ನಮನಗಳು. ದೇಶದ ಗಡಿ ಕಾಯುವ ಯೋಧರಿಗೆ ನಮಿಸುತ್ತೇನೆ ಎಂದು ದೆಹಲಿ ಸಾರಿಗೆ ಸಚಿವರು ಹೇಳಿದ್ದಾರೆ.
ನನ್ನ ಭಾವನೆಗಳು ಈ ದಿನಕ್ಕೆ 2 ರೀತಿಯಲ್ಲಿ ಬೆಸೆದುಕೊಂಡಿದೆ. ನಮಗೆ ಸ್ವಾತಂತ್ರ್ಯ ಲಭಿಸುವುದಕ್ಕಾಗಿ ಹಲವು ವೀರಪುತ್ರರು ಅವರ ಜೀವವನ್ನು ಪಣವಾಗಿಟ್ಟಿದ್ದರು. ಆದರೆ ಇಂದು ಪ್ರಜಾಸತ್ತಾತ್ಮಕ ರೀತಿಯಲ್ಲಿ ಚುನಾಯಿತರಾದ ಮುಖ್ಯಮಂತ್ರಿಯೊಬ್ಬರನ್ನು ಜೈಲಿಗೆ ಕಳುಹಿಸಲಾಗಿದೆ. ಅರವಿಂದ್ ಕೇಜ್ರಿವಾಲ್ ಆಧುನಿಕ ಸ್ವಾತಂತ್ರ್ಯ ಹೋರಾಟಗಾರ. ಅವರು ಜನರನ್ನು ಬಡತನ ಹಾಗೂ ಅನಕ್ಷರತೆಯಿಂದ ಮುಕ್ತಗೊಳಿಸಲು ಯತ್ನಿಸಿದರು, ಆದರೂ ತಾವು ಮಾಡದ ತಪ್ಪಿಗೆ ಜೈಲಿನಲ್ಲಿದ್ದಾರೆ, ನಾವು ಚುನಾಯಿತ ಮುಖ್ಯಮಂತ್ರಿಯನ್ನು ಜೈಲಿಗೆ ಕಳುಹಿಸುವುದಕ್ಕಾಗಿ ಸ್ವಾತಂತ್ರ್ಯ ಪಡೆದಿದ್ದಾ? ಎಂದು ಗೆಹ್ಲೋಟ್ ಪ್ರಶ್ನಿಸಿದರು.