ಗುವಾಹಟಿ: ಮೇಘಾಲಯದಲ್ಲಿ ಕಾಂಗ್ರೆಸ್ ನ ನಾಲ್ವರು ಶಾಸಕರಲ್ಲಿ ಮೂವರು ಸೋಮವಾರ ಆಡಳಿತಾರೂಢ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್(ಎಂಡಿಎ) ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್‌ಪಿಪಿ) ಗೆ ಸೇರ್ಪಡೆಯಾದರು.
ಕಾಂಗ್ರೆಸ್ ಶಾಸಕರಾದ ಚಾರ್ಲ್ಸ್ ಮಾರ್ಂಗಾರ್, ಗೇಬ್ರಿಯಲ್ ವಾಹ್ಲಾಂಗ್ ಮತ್ತು ಡಾ. ಸೆಲೆಸ್ಟಿನ್ ಲಿಂಗ್ಡೋಹ್ ಅವರು ಎನ್‌ಪಿಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ, ಉಪಮುಖ್ಯಮಂತ್ರಿ ಪ್ರೆಸ್ಟೋನ್ ಟೈನ್‌ಸಾಂಗ್ ಮತ್ತು ಪಕ್ಷದ ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಎನ್ ಪಿಪಿ ಸೇರ್ಪಡೆಯಾದರು.
ಅಸೆಂಬ್ಲಿ ಸೆಕ್ರೆಟರಿಯೇಟ್ ಹೊರಡಿಸಿದ ಬುಲೆಟಿನ್ ಪ್ರಕಾರ, "ಸ್ಪೀಕರ್ ಥಾಮಸ್ ಎ. ಸಂಗ್ಮಾ ಅವರು ಎನ್‌ಪಿಪಿಯೊಂದಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮೂವರು ಸದಸ್ಯರ ವಿಲೀನಕ್ಕೆ ಅನುಮತಿ ನೀಡಿದ್ದಾರೆ".
ಕಳೆದ ವರ್ಷ ನಡೆದ ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದಿತ್ತು. ಆದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಗ್ಯಾಂಬೆಗ್ರೆ ಶಾಸಕ ಸಲೆಂಗ್ ಸಂಗ್ಮಾ ಅವರು ಎನ್‌ಪಿಪಿಯ ಅಗಾಥಾ ಸಂಗ್ಮಾ ಅವರ ವಿರುದ್ಧ ತುರಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ನಂತರ ಕಾಂಗ್ರೆಸ್ ಬಲ ನಾಲ್ಕಕ್ಕೆ ಇಳಿಕೆಯಾಗಿತ್ತು. ಸೋಮವಾರದ ಬೆಳವಣಿಗೆಯ ನಂತರ ಕಾಂಗ್ರೆಸ್‌ಗೆ ಕೇವಲ ಒಬ್ಬ ಶಾಸಕರನ್ನು ಮಾತ್ರ ಉಳಿಸಿಕೊಂಡಿದೆ.
ಮೂವರು ಕಾಂಗ್ರೆಸ್ ಶಾಸಕರು ಪಕ್ಷ ತೊರೆದಿರುವುದರಿಂದ ಏಕೈಕ ಶಾಸಕ ರೋನಿ ವಿ.ಲಿಂಗ್ಡೋಹ್ ಅವರು ವಿರೋಧ ಪಕ್ಷದ ನಾಯಕ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.