ಪಾಟ್ನಾ: ಪುಟ್ಟ ಮಗುವೊಂದು ಆಟಿಕೆ ಎಂದು ಭಾವಿಸಿ ಜೀವಂತ ಹಾವನ್ನೇ ಕಚ್ಚಿ ಕೊಂದು ಹಾಕಿರುವ ವಿಲಕ್ಷಣ ಘಟನೆ ಬಿಹಾರದಲ್ಲಿ ವರದಿಯಾಗಿದೆ.
ಬಿಹಾರದ ಗಯಾ (Gaya district) ಜಿಲ್ಲೆಯ ಜಮುಹರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹಾವನ್ನು ಕಚ್ಚಿ ಕೊಂದು ಹಾಕಿರುವ ಮಗು ಅಪಾಯದಿಂದ ಪಾರಾಗಿದೆ.
ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ವಿಡಿಯೋ ವೈರಲ್ (Viral Video) ಆಗಿದ್ದು, ಅದೃಷ್ಟವಶಾತ್ ಪುಟ್ಟ ಮಗುವಿಗೆ ಯಾವುದೇ ರೀತಿಯ ಅಪಾಯವಾಗಿಲ್ಲ. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮಗುವಿನ ಬಾಯಿಯನ್ನು ತೆರೆಯುವಂತೆ ಪ್ರಯತ್ನಿಸಿದ್ದು, ಸತ್ತ ಹಾವಿನ ಚಿತ್ರವನ್ನೂ ವಿಡಿಯೋದಲ್ಲಿ ತೋರಿಸಲಾಗಿದೆ.
ಮಗುವಿನ ಪೋಷಕರು ಹೇಳಿರುವಂತೆ ಮಗು ಟೆರೇಸ್‌ನಲ್ಲಿ ಆಟವಾಡುತ್ತಿದ್ದಾಗ ಅಲ್ಲಿಗೆ ಹಾವೊಂದು ಬಂದಿದೆ. ಮಗು ಹಾವನ್ನು ಕಂಡು ಆಟವಾಡುವ ಸಾಮಗ್ರಿ ಎಂದು ತಿಳಿದು ಕಚ್ಚಿದೆ.
ಈ ವೇಳೆ ಸಾಕಷ್ಟು ಹೊತ್ತು ಒದ್ದಾಡಿದ ಹಾವು ಬಳಿಕ ಸಾವನ್ನಪ್ಪಿದೆ. ಮಗು ಹಾವನ್ನು ಜಗಿಯುತ್ತಿರುವುದನ್ನು ಕಂಡ ಕೂಡಲೇ ತಾಯಿ ಅದನ್ನು ಮಗುವಿನ ಬಾಯಿಯಿಂದ ತೆಗೆದು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ದಂಗಾದ ವೈದ್ಯರು
ಇನ್ನು ವಿಚಾರ ತಿಳಿದ ವೈದ್ಯರು ದಂಗಾಗಿದ್ದು, ಆರೋಗ್ಯ ಕೇಂದ್ರದ ವೈದ್ಯಕೀಯ ಸಿಬ್ಬಂದಿ ಮಗುವನ್ನು ಪರೀಕ್ಷಿಸಿ ದೈಹಿಕವಾಗಿ ಯಾವುದೇ ಹಾನಿಯಿಲ್ಲ ಎಂದು ದೃಢಪಡಿಸಿ, ಮಗು ಆರೋಗ್ಯವಾಗಿರುವುದಾಗಿ ಘೋಷಿಸಿದ್ದಾರೆ. ಅದೃಷ್ಟವಶಾತ್ ಮಗು ಕಚ್ಚಿದ ಹಾವು ವಿಷಕಾರಿಯಲ್ಲ. ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಈ ಹಾವುಗಳು ಕಂಡುಬರುತ್ತದೆ. ಹೀಗಾಗಿ ಮಗುವಿಗೆ ಏನೂ ಆಗಿಲ್ಲ ಎಂದು ಅವರು ಹೇಳಿದರು.