ನವದೆಹಲಿ: ರಾಷ್ಟ್ರ ರಾಜಧಾನಿಯ ಶಹದಾರಾ ಪ್ರದೇಶದ ಹೆಡ್ಗೆವಾರ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರೊಬ್ಬರಿಗೆ 50 ವರ್ಷದ ವ್ಯಕ್ತಿಯೊಬ್ಬರು ಕಪಾಳ ಮೋಕ್ಷ ಮಾಡಿರುವ ಘಟನೆ ಭಾನುವಾರ ನಡೆದಿದೆ. ಅಲ್ಲದೇ, ಅವರ ಮಗ ಮತ್ತು ಮಗಳು ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರೋಪಿಯನ್ನು ಯಾದ್ ರಾವ್ ಎಂದು ಗುರುತಿಸಲಾಗಿದೆ. ತಲೆಗೆ ಗಾಯವಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದು ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.
ಸುದ್ದಿ ತಿಳಿದ ತಕ್ಷಣವೇ ಸಿಬ್ಬಂದಿಯನ್ನು ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ಹೆಚ್ಚುವರಿ ಡಿಸಿಪಿ (ಶಹದಾರ) ರಾಜೀವ್ ಕುಮಾರ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ತೀವ್ರವಾಗಿ ಕುಡಿದಿದ್ದರಿಂದ ಮನೆಯಲ್ಲಿ ಕೆಳಗೆ ಬಿದ್ದು ತಲೆ ಗಾಯಗೊಂಡಿದ್ದ ಯಾದ್ ರಾವ್ ಅವರನ್ನು ಮಗ ಮತ್ತು ಮಗಳು ಹೆಡ್ಗೆವಾರ್ ಆಸ್ಪತ್ರೆಗೆ ಕರೆತಂದಿದ್ದಾರೆ. ಕರ್ತವ್ಯ ನಿರತ ಜೂನಿಯರ್ ಡಾ.ಮನೋಜ್ ,ರಾವ್ ಅವರ ತಲೆಗೆ ಹೊಲಿಗೆ ಹಾಕುವಾಗ ಸ್ವಲ್ಪ ನೋವಾಗಿದೆ. ಇದರಿಂದ ಸಿಟ್ಟಾದ ಆರೋಪಿ ಎದ್ದುನಿಂತು ಡಾ.ಮನೋಜ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಅವರ ಮಗಳು ಮತ್ತು ಮಗ ಸಹ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಅವರು ವಿವರಿಸಿದರು.
ಆಸ್ಪತ್ರೆಯ ದೂರಿನ ಆಧಾರದ ಮೇಲೆ, ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 121 ಮತ್ತು 223 ಮತ್ತು ಸೆಕ್ಷನ್ 3 (ಹಿಂಸಾಚಾರದ ನಿಷೇಧ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ
ಆರೋಪಿ ಯಾದ್ ರಾವ್ ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಪ್ರಜ್ಞೆ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.