ಥಾಣೆ: ಮಹಾರಾಷ್ಟ್ರದ ಮಾಜಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸಂಜಯ್ ಪಾಂಡೆ ಮತ್ತು ಇತರ 6 ಜನರ ವಿರುದ್ಧ ಥಾಣೆ ನಗರದಲ್ಲಿ ಸುಲಿಗೆ, ಕ್ರಿಮಿನಲ್ ಬೆದರಿಕೆ ಮತ್ತು ನಕಲಿ ದಾಖಲೆಗಳನ್ನು ಸಿದ್ಧಪಡಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಹಿಂದಿನ ಮಹಾ ವಿಕಾಸ್ ಆಘಾಡಿ ಸರ್ಕಾರದ ಅವಧಿಯಲ್ಲಿ ಡಿಜಿಪಿಯಾಗಿದ್ದ ಪಾಂಡೆ ಸೇರಿದಂತೆ ಏಳು ಜನರ ವಿರುದ್ಧ ಮುಂಬೈನ ಉದ್ಯಮಿ ಸಂಜಯ್ ಪುನಾಮಿಯಾ ಸೋಮವಾರ ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ನೀಡಿದ ನಂತರ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದೆ.
ಮೇ 2021 ಮತ್ತು ಜೂನ್ 30, 2024 ರ ನಡುವೆ ಆರೋಪಿಗಳಿಂದ ಸಾಕಷ್ಟು ತೊಂದರೆ ಎದುರಿಸಿರುವುದಾಗಿ ಪುನಾಮಿಯಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇವರಲ್ಲದೇ ಮಾಜಿ ಎಸಿಪಿ ಸರ್ದಾರ್ ಪಾಟೀಲ್, ಇನ್ಸ್‌ಪೆಕ್ಟರ್ ಮನೋಹರ್ ಪಾಟೀಲ್, ವಕೀಲ ಶೇಖರ್ ಜಗತಾಪ್, ಬಿಲ್ಡರ್ ಶ್ಯಾಮಸುಂದರ್ ಅಗ್ರವಾ, ಮತ್ತಿಬ್ಬರು ಆರೋಪಿಗಳಾಗಿದ್ದಾರೆ.
ಆರೋಪಿಗಳು 2016 ರಲ್ಲಿ ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಪ್ರಕರಣದ ತನಿಖೆಯಲ್ಲಿ ಕಾನೂನುಬಾಹಿರವಾಗಿ ಭಾಗಿಯಾಗಿದ್ದಾರೆ. ಅವರು ದೂರುದಾರು ಮತ್ತಿತರ ಉದ್ಯಮಿಗಳಿಗೆ ಸುಳ್ಳು ಪ್ರಕರಣಗಳ ಮೂಲಕ ಬೆದರಿಕೆ ಹಾಕಿ, ಹಣವನ್ನು ಸುಲಿಗೆ ಮಾಡಿದ್ದರು. ನಕಲಿ ದಾಖಲೆಗಳನ್ನು ಸಿದ್ಧಪಡಿಸಿದ್ದರು. ಅವರಲ್ಲಿ ಒಬ್ಬರು ನ್ಯಾಯಾಲಯಗಳನ್ನು ತಪ್ಪುದಾರಿಗೆಳೆಯಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ನಂತೆ ನಟಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸುಲಿಗೆ, ಕ್ರಿಮಿನಲ್ ಸಂಚು, ಸುಳ್ಳು ಸಾಕ್ಷ್ಯ, ಕ್ರಿಮಿನಲ್ ಬೆದರಿಕೆ ನ್ಯಾಯಕ್ಕೆ ಅಡ್ಡಿ, ಹಲ್ಲೆ, ನಕಲಿ ದಾಖಲೆ ಬಳಕೆ ಸೇರಿದಂತೆ ಹಳೆಯ ಐಪಿಸಿಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ಪಟ್ಟಿ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.