ಮುಂಬೈ: ಶಿವಸೇನೆ (ಶಿಂಧೆ ಬಣ) ಸಂಸದ, ಮಹಾರಾಷ್ಟ್ರ ಹಂಗಾಮಿ ಸಿಎಂ ಏಕನಾಥ್ ಶಿಂಧೆ ಪುತ್ರ ಶ್ರೀಕಾಂತ್ ಶಿಂಧೆ ತಮಗೆ ಡಿಸಿಎಂ ಸ್ಥಾನ ನೀಡಲಾಗುತ್ತದೆ ಎಂಬ ಸುದ್ದಿಗಳ ಬಗ್ಗೆ ಮೌನ ಮುರಿದಿದ್ದಾರೆ.
ಈ ವಿಷಯವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ರಾಜ್ಯ ಸರ್ಕಾರದಲ್ಲಿ ತಮಗೆ ಡಿಸಿಎಂ ಸ್ಥಾನ ನೀಡುವ ಕುರಿತ ಸುದ್ದಿಗಳು ಆಧಾರ ರಹಿತ ಹಾಗೂ ತಪ್ಪು ಸುದ್ದಿಗಳಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.
ಲೋಕಸಭಾ ಚುನಾವಣೆ ಬಳಿಕ ಶ್ರೀಕಾಂತ್ ಶಿಂಧೆಗೆ ಕೇಂದ್ರ ಸಚಿವ ಸ್ಥಾನವನ್ನು ಸ್ವೀಕರಿಸುವಂತೆ ಆಹ್ವಾನಿಸಲಾಗಿತ್ತು. ಆದರೆ ಪಕ್ಷ ಸಂಘಟನೆಯ ಉದ್ದೇಶವನ್ನು ಕಾರಣವಾಗಿ ನೀಡಿ ಕೇಂದ್ರ ಸಚಿವ ಸ್ಥಾನವನ್ನು ಶ್ರೀಕಾಂತ್ ಶಿಂಧೆ ನಿರಾಕರಿಸಿದ್ದರು.
'ನಾನು ಉಪಮುಖ್ಯಮಂತ್ರಿಯಾಗುತ್ತೇನೆ ಎಂಬ ಸುದ್ದಿ ಕಳೆದ ಎರಡು ದಿನಗಳಿಂದ ಪ್ರಶ್ನಾರ್ಥಕ ಚಿಹ್ನೆಗಳೊಂದಿಗೆ ಹರಿದಾಡುತ್ತಿದೆ. ಇದರಲ್ಲಿ ಯಾವುದೇ ಸತ್ಯವಿಲ್ಲ ಮತ್ತು ಅಂತಹ ಎಲ್ಲಾ ಸುದ್ದಿಗಳು ಆಧಾರರಹಿತವಾಗಿವೆ" ಎಂದು ಕಲ್ಯಾಣ್ ಸಂಸದ ಟ್ವಿಟರ್ ನಲ್ಲಿ ಹೇಳಿದ್ದಾರೆ.
"ನನಗೆ ಅಧಿಕಾರದ ಆಸೆ ಇಲ್ಲ. ನಾನು ರಾಜ್ಯದಲ್ಲಿ ಯಾವುದೇ ಸಚಿವ ಸ್ಥಾನದ ರೇಸ್‌ನಲ್ಲಿ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ" ಎಂದು ಅವರು ತಮ್ಮ ಲೋಕಸಭೆ ಕ್ಷೇತ್ರ ಮತ್ತು ಶಿವಸೇನೆಗಾಗಿ ಕೆಲಸ ಮಾಡುವ ಬದ್ಧತೆಯನ್ನು ದೃಢಪಡಿಸಿದರು.
ಮಹಾಯುತಿ ಸಮ್ಮಿಶ್ರ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಕೊಂಚ ತಡವಾಗಿದೆ ಎಂದು ಶಿಂಧೆ ಹೇಳಿದ್ದು, ಇದು ವ್ಯಾಪಕ ಚರ್ಚೆ ಹಾಗೂ ವದಂತಿಗಳಿಗೆ ಕಾರಣವಾಗಿದೆ.
ತಂದೆ ಅನಾರೋಗ್ಯದ ಕಾರಣ ಎರಡು ದಿನ ವಿರಾಮ ತೆಗೆದುಕೊಂಡು ಗ್ರಾಮಕ್ಕೆ ತೆರಳಿ ವಿಶ್ರಾಂತಿ ಪಡೆದ ನಂತರ ಊಹಾಪೋಹ ತೀವ್ರಗೊಂಡಿದೆ ಎಂದು ಶ್ರೀಕಾಂತ್ ಶಿಂಧೆ ಹೇಳಿದ್ದಾರೆ.