ಚಂಡೀಗಢ: ಮಾರಣಾಂತಿಕ ಗುಂಡಿನ ದಾಳಿಯಿಂದ ಪಾರಾದ ಒಂದು ದಿನದ ನಂತರ ಶಿರೋಮಣಿ ಅಕಾಲಿದಳದ ನಾಯಕ(SAD) ಸುಖಬೀರ್ ಸಿಂಗ್ ಬಾದಲ್ ಅವರು ಇಂದು ಗುರುವಾರ ಪಂಜಾಬ್‌ನ ರೂಪ್ ನಗರ ಜಿಲ್ಲೆಯ ತಖ್ತ್ ಕೇಸ್‌ಗಢ್ ಸಾಹಿಬ್ ಹೊರಗೆ ಬಿಗಿ ಭದ್ರತೆಯ ನಡುವೆ 'ಸೇವಾದಾರ' ಕರ್ತವ್ಯವನ್ನು ನಿರ್ವಹಿಸಿದರು.
ಪಂಜಾಬ್ ಮಾಜಿ ಉಪಮುಖ್ಯಮಂತ್ರಿಯಾಗಿರುವ ಸುಖ್ ಬೀರ್ ಸಿಂಗ್ ಬಾದಲ್ ಅವರಿಗೆ Z+ ಭದ್ರತೆಯನ್ನು ನೀಡಲಾಗಿದ್ದು, ಭದ್ರತಾ ಸಿಬ್ಬಂದಿಯ ಬಿಗಿ ಭದ್ರತೆ ನಡುವೆ ಇಂದು ಆನಂದಪುರ ಸಾಹಿಬ್ ದೇಗುಲಕ್ಕೆ ಆಗಮಿಸಿದರು.
ನೀಲಿ 'ಸೇವಾದರ್' ಸಮವಸ್ತ್ರವನ್ನು ಧರಿಸಿದ್ದ ಬಾದಲ್ ಗುರುದ್ವಾರದ ಪ್ರವೇಶದ್ವಾರದಲ್ಲಿ ಒಂದು ಕೈಯಲ್ಲಿ ಈಟಿ ಹಿಡಿದುಕೊಂಡು ಕುಳಿತುಕೊಂಡರು.
2007 ರಿಂದ 2017 ರವರೆಗೆ ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿದಳ (SAD) ಸರ್ಕಾರ ಮತ್ತು ಅವರ ಪಕ್ಷವು ಮಾಡಿದ ತಪ್ಪುಗಳಿಗಾಗಿ ಸಿಖ್‌ರ ತಾತ್ಕಾಲಿಕ ಸಂಸ್ಥೆಯಾದ ಅಕಾಲ್ ತಖ್ತ್‌ನಿಂದ ಅವರು ಧಾರ್ಮಿಕ ಶಿಕ್ಷೆಗೆ ಒಳಗಾಗುತ್ತಿದ್ದಾರೆ.
ಅಮೃತಸರದ ಸ್ವರ್ಣಮಂದಿರ ಜೊತೆಗೆ, ತಖ್ತ್ ಕೇಸ್‌ಗಢ್ ಸಾಹಿಬ್, ತಖ್ತ್ ದಮ್ದಾಮಾ ಸಾಹಿಬ್ ಮತ್ತು ಮುಕ್ತ್ಸರ್‌ನಲ್ಲಿರುವ ದರ್ಬಾರ್ ಸಾಹಿಬ್ ಮತ್ತು ಫತೇಘರ್ ಸಾಹಿಬ್‌ನಲ್ಲಿ ತಲಾ ಎರಡು ದಿನಗಳ ಕಾಲ 'ಸೇವಾದಾರ' ಸೇವೆಯನ್ನು ನಿರ್ವಹಿಸಲು ಅಕಾಲ್ ತಖ್ತ್ ಬಾದಲ್ ಅವರಿಗೆ ಸೂಚಿಸಿದೆ.
ಬಾದಲ್ ಅವರು ತಖ್ತ್ ಕೇಸ್‌ಗಢ್ ಸಾಹಿಬ್‌ಗೆ ಭೇಟಿ ನೀಡುವ ಮುನ್ನ ಪೊಲೀಸರು ವಿಸ್ತಾರವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಿದರು. ಫೂಲ್ ಪ್ರೂಫ್ ರೋಧಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ರೂಪನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗುಲ್ನೀತ್ ಸಿಂಗ್ ಖುರಾನಾ ತಿಳಿಸಿದ್ದಾರೆ.
ಸಾಮಾನ್ಯ ಉಡುಪಿನ ಪೊಲೀಸರನ್ನೂ ನಿಯೋಜಿಸಲಾಗಿದ್ದು, ಪೊಲೀಸರು ನಿಗಾ ಇರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುದ್ವಾರದಲ್ಲಿ ಸುಖ್ ಬೀರ್ ಸಿಂಗ್ ಬಾದಲ್ ಅಲ್ಲದೆ, ಎಸ್‌ಎಡಿ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದಾರೆ.