ಶಂಭು: ಪಂಜಾಬ್-ಹರಿಯಾಣ ಗಡಿಯಲ್ಲಿರುವ ಶಂಭು ಪ್ರತಿಭಟನಾ ಸ್ಥಳದಿಂದ 101 ಮಂದಿ ರೈತರ ಗುಂಪು ಭಾನುವಾರ ಮಧ್ಯಾಹ್ನ ದೆಹಲಿಗೆ ತನ್ನ ಪಾದಯಾತ್ರೆಯನ್ನು ಪುನರಾರಂಭಿಸಿದರು. ಆದರೆ ಹರಿಯಾಣ ಭದ್ರತಾ ಸಿಬ್ಬಂದಿಗಳು ಬಹುಪದರದ ಬ್ಯಾರಿಕೇಡಿಂಗ್ ನಿರ್ಮಿಸಿದ್ದರಿಂದ ಮಾರ್ಗಮಧ್ಯೆ ಅರ್ಧದಲ್ಲಿಯೇ ತಡೆದರು.
ಬ್ಯಾರಿಕೇಡ್‌ಗಳನ್ನು ತಲುಪಿದ ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಶೆಲ್‌ಗಳನ್ನು ಬಳಸಲಾಯಿತು. ಫಿರಂಗಿಗಳ ಮೂಲಕ ವಾಟರ್ ಜೆಟ್‌ಗಳನ್ನು ಹೊಡೆದರು. ದೆಹಲಿ ಸರ್ಕಾರದಿಂದ ಅನುಮತಿ ಪಡೆದ ನಂತರವೇ ರೈತರ ಸಂಘಟನೆಗಳು ದೆಹಲಿಗೆ ಮೆರವಣಿಗೆ ನಡೆಸಬಹುದು ಎಂದು ಅಂಬಾಲಾ ಪೊಲೀಸರು ಈ ಹಿಂದೆ ಹೇಳಿದ್ದರು.
'ಮರ್ಜೀವರಾಸ್' ಎಂದು ಕರೆಯಲ್ಪಡುವ ಗುಂಪು, (ಯಾರಾದರೂ ಒಂದು ಕಾರಣಕ್ಕಾಗಿ ಸಾಯಲು ಸಿದ್ಧ ಎಂದರ್ಥ), ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತ್ರಿಗಾಗಿ ಮೆರವಣಿಗೆ ಸಾಗಿದರು. ಪ್ರತಿಭಟನಾ ಮೆರವಣಿಗೆ ಹಿನ್ನೆಲೆಯಲ್ಲಿ ಇಂದು ದೆಹಲಿಯ ಸಿಂಘು ಗಡಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ದೆಹಲಿ ಪೊಲೀಸರು ಅಲರ್ಟ್ ಆಗಿದ್ದು, ಸಿಂಘು ಗಡಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಶಂಭು ಗಡಿಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಇದು ಹೆಚ್ಚಾಗಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಘರ್ಷಣೆ ಉಲ್ಬಣಗೊಳ್ಳುತ್ತಿದ್ದಂತೆ, ಭದ್ರತಾ ಪಡೆಗಳು ಅಶ್ರುವಾಯು ಶೆಲ್ ಗಳನ್ನು ಬಳಸಿದರು. ದಾಳಿಯಲ್ಲಿ ಪ್ರತಿಭಟನಾಕಾರರೊಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯಬೇಕಾಯಿತು ಎಂದು ರೈತರು ಹೇಳಿದ್ದಾರೆ.
ತಮ್ಮ ಪ್ರತಿಭಟನೆ ಭಾನುವಾರ 300 ದಿನಗಳನ್ನು ತಲುಪಿದೆ ಎಂದು ಪಂಜಾಬ್ ರೈತ ನಾಯಕ ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಬ್ಯಾನರ್ ಅಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮೆರವಣಿಗೆಯನ್ನು ಭದ್ರತಾ ಪಡೆಗಳು ತಡೆದ ನಂತರ ಫೆಬ್ರವರಿ 13 ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿ ಭಾಗದಲ್ಲಿ ಮೊಕ್ಕಾಂ ಹೂಡಿದ್ದಾರೆ.