ಲಖನೌ: ವೇಗವಾಗಿ ಬಂದ ಕಾರೊಂದು ರಸ್ತೆ ದಾಟುತ್ತಿದ್ದ ಟಾಂಗಾಗೆ ಗುದ್ದಿದ್ದು, ಟಾಂಗಾದಲ್ಲಿದ್ದ ಕುದುರೆ ಸ್ಥಳದಲ್ಲೇ ಸಾವನ್ನಪ್ಪಿದೆ.
ಉತ್ತರ ಪ್ರದೇಶದ ಬಾಗ್‌ಪತ್‌ನ ದೆಹಲಿ-ಸಹಾರನ್‌ಪುರ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಇಂದು ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದೆ. ದುರಂತದಲ್ಲಿ ಒಂದು ಕುದುರೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ನರೇಶ್ ರಾಣಾ, ರೇಣು, ಆಕಾಶ್, ಪ್ರಾಂಜಲ್ ಮತ್ತು ರಶ್ಮಿ ಎಂದು ಗುರುತಿಸಲಾಗಿದ್ದು, ಅವರನ್ನು ಪ್ರಾಥಮಿಕ ವೈದ್ಯಕೀಯ ಆರೈಕೆಗಾಗಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ವೇಗವಾಗಿ ಬಂದ ಕಾರೊಂದು ರಸ್ತೆಗೆ ಅಡ್ಡಲಾಗಿ ರಸ್ತೆ ದಾಟುತ್ತಿದ್ದ ಟಾಂಗಾಗೆ ಢಿಕ್ಕಿಯಾಗಿದ್ದು, ಈ ವೇಳೆ ಕಾರು ನೇರವಾಗಿ ಕುದುರೆಗೆ ಗುದ್ದಿದ್ದು, ಕಾರು ಗುದ್ದಿದ ರಭಸಕ್ಕೆ ಕುದುರೆ ಮೇಲಕ್ಕೆ ಹಾರಿ ಭೀಕರವಾಗಿ ಕೆಳಗೆ ಬಿದ್ದಿದೆ. ತೀವ್ರ ರಕ್ತಸ್ರಾವದಿಂದಾಗಿ ಕುದುರೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಪಘಾತದ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹೆದ್ದಾರಿಯ ಎಡ ಲೇನ್‌ನಲ್ಲಿ ಕಾರು ವೇಗವಾಗಿ ಚಲಿಸುತ್ತಿತ್ತು. ಅಷ್ಟರಲ್ಲಿ ಎಡಬದಿಯಿಂದ ಒಂದು ಕುದುರೆ ಹೆದ್ದಾರಿ ಪ್ರವೇಶಿಸಿದ್ದು, ಈ ವೇಳೆ ನಿಯಂತ್ರಣ ಕಳೆದುಕೊಂಡ ಚಾಲಕ ನೇರವಾಗಿ ಕಾರನ್ನು ಕುದುರೆಗೆ ಗುದ್ದಿಸಿದ್ದಾನೆ. ಈ ವೇಳೆ ಕಾರು ಗುದ್ದಿದ ರಭಸಕ್ಕೆ ಕುದುರೆ ಸುಮಾರು ಅಡಿಗಳಷ್ಟು ಮೇಲಕ್ಕೆ ಹಾರಿ ಬಿದ್ದಿದೆ. ಕುದುರೆಗೆ ಕಾರು ಗುದ್ದಿದ ಪರಿಣಾಮ ವಾಹನದ ಬಾನೆಟ್ ಮತ್ತು ಬಂಪರ್ ನುಜ್ಜುಗುಜ್ಜಾಗಿದೆ. ಬಳಿಕ ಕಾರು ನೇರವಾಗಿ ಹೋಗಿ ಲಾರಿಗೆ ಢಿಕ್ಗಾಕಿಯಾಗಿದೆ. ಈ ವೇಳೆ ಕಾರಿನಲ್ಲಿದ್ದವರು ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.