ನವದೆಹಲಿ: ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಅವರನ್ನು ಇಸ್ಲಾಮಿಕ್ ಬಂಡುಕೋರರು ಪದಚ್ಯುತಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಸಿರಿಯಾದಿಂದ 75 ಮಂದಿ ಭಾರತೀಯರನ್ನು ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ.
ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗೆ ಸರ್ಕಾರವು ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಎಂದು ಸಚಿವಾಲಯ ಒತ್ತಿ ಹೇಳಿದೆ.
ಸಿರಿಯಾದಲ್ಲಿ ಇತ್ತೀಚಿನ ಬೆಳವಣಿಗೆಗಳ ನಂತರ ಭಾರತ ಸರ್ಕಾರವು ಇಂದು 75 ಭಾರತೀಯ ಪ್ರಜೆಗಳನ್ನು ಸಿರಿಯಾದಿಂದ ಸ್ಥಳಾಂತರಿಸಿದೆ. ಸ್ಥಳಾಂತರಿಸಿದವರಲ್ಲಿ ಸೈದಾ ಜೈನಾಬ್‌ನಲ್ಲಿ ಸಿಲುಕಿರುವ ಜಮ್ಮು ಮತ್ತು ಕಾಶ್ಮೀರದ 44 ‘ಜೈರೀನ್’ಗಳೂ ಸೇರಿದ್ದಾರೆ. ಎಲ್ಲಾ ಭಾರತೀಯ ಪ್ರಜೆಗಳು ಸುರಕ್ಷಿತವಾಗಿ ಲೆಬನಾನ್‌ಗೆ ದಾಟಿದ್ದು, ಲಭ್ಯವಿರುವ ವಾಣಿಜ್ಯ ವಿಮಾನಗಳ ಮೂಲಕ ಭಾರತಕ್ಕೆ ಹಿಂತಿರುಗುತ್ತಾರೆ ಎಂದು ವಿದೇಶಾಂಗ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಭಾರತ ಸರ್ಕಾರವು ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಸಿರಿಯಾದಲ್ಲಿ ಉಳಿದಿರುವ ಭಾರತೀಯ ಪ್ರಜೆಗಳು ಡಮಾಸ್ಕಸ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಅವರ ತುರ್ತು ಸಹಾಯವಾಣಿ ಸಂಖ್ಯೆ +963 993385973 (ವಾಟ್ಸಾಪ್‌ನಲ್ಲಿಯೂ ಸಹ) ಮತ್ತು ಇಮೇಲ್ ಐಡಿ (hoc.damascus@mea.gov.in)ಯೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ. ಭಾರತ ಸರ್ಕಾರವು ಸಿರಿಯಾ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದೆ.
ಇಸ್ಲಾಮಿ ಒಕ್ಕೂಟದ ಹಯಾತ್ ತಹ್ರೀರ್ ಅಲ್-ಶಾಮ್ ನೇತೃತ್ವದ ಬಂಡುಕೋರ ಪಡೆಗಳು ಹಲವಾರು ಇತರ ಪ್ರಮುಖ ನಗರಗಳು ಮತ್ತು ಪಟ್ಟಣಗಳನ್ನು ವಶಪಡಿಸಿಕೊಂಡ ನಂತರ ರಾಜಧಾನಿ ಡಮಾಸ್ಕಸ್ ಅನ್ನು ಕೂಡ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಡಿಸೆಂಬರ್ 8 ರಂದು ಸಿರಿಯನ್ ಸರ್ಕಾರ ಪತನವಾಯಿತು.
ಬಂಡುಕೋರ ಗುಂಪು ಹಯಾತ್ ತಹ್ರೀರ್ ಅಲ್-ಶಾಮ್ ಡಮಾಸ್ಕಸ್ ಅನ್ನು ಹಿಡಿತಕ್ಕೆ ತೆಗೆದುಕೊಂಡ ನಂತರ ಸಿರಿಯಾ ಅಧ್ಯಕ್ಷ ಅಸ್ಸಾದ್ ದೇಶದಿಂದ ಪಲಾಯನ ಮಾಡಿದ್ದು, ಅಸ್ಸಾದ್ ಮಾಸ್ಕೋದಲ್ಲಿದ್ದಾರೆ ಮತ್ತು ಅವರಿಗೆ ಆಶ್ರಯ ನೀಡಲಾಗಿದೆ ಎಂದು ರಷ್ಯಾದ ಮಾಧ್ಯಮ ವರದಿ ಮಾಡಿದೆ.