ಗೋರಖ್‌ಪುರ: ವಿಜ್ಞಾನಿಯ ಅಪ್ರಾಪ್ತ ಮಗ, ಶಾಲೆಗೆ ಹೋಗು ಎಂದಿದ್ದಕ್ಕೆ ಹೆತ್ತ ತಾಯಿಯನ್ನೇ ಕೊಲೆ ಮಾಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ.
ಮೊದಲು ತನ್ನ ತಾಯಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ವಿಜ್ಞಾನಿಯಾಗಿರುವ ತನ್ನ ತಂದೆ ಮತ್ತು ಪೊಲೀಸರ ದಾರಿ ತಪ್ಪಿಸಿದ್ದ ಬಾಲಕ ಬಳಿಕ ವಿಚಾರಣೆ ವೇಳೆ ಮನೆಯಲ್ಲಿ ತನ್ನ ತಾಯಿಯನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್ 3 ರಂದು 11ನೇ ತರಗತಿಯ ವಿದ್ಯಾರ್ಥಿ, ತನ್ನ ತಾಯಿ ಆರತಿ ವರ್ಮಾ ಅವರನ್ನು ಗೋಡೆಗೆ ತಳ್ಳಿದ್ದಾನೆ. ಆರತಿ ವರ್ಮಾ ಅವರ ತಲೆ ಬಲವಾದ ಪೆಟ್ಟಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಸ್ತೃತ ತನಿಖೆಯ ವೇಳೆ ಈ ಸಂಗತಿ ಬೆಳಕಿಗೆ ಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ(ಉತ್ತರ) ಜಿತೇಂದ್ರ ಕುಮಾರ್ ಶ್ರೀವಾಸ್ತವ ಅವರು ಹೇಳಿದ್ದಾರೆ.
"ಎರಡು ಗಂಟೆಗಳ ವಿಚಾರಣೆಯ ನಂತರ, ಅಪ್ರಾಪ್ತ ಬಾಲಕ ಜಗಳದ ಸಮಯದಲ್ಲಿ ತನ್ನ ತಾಯಿಯನ್ನು ಗೋಡೆಗೆ ತಳ್ಳಿದ ಪರಿಣಾನ ತಲೆಗೆ ಗಂಭೀರ ಗಾಯವಾಯಿತು ಎಂದು ಒಪ್ಪಿಕೊಂಡಿದ್ದಾನೆ" ಎಂದು ಅವರು ಹೇಳಿದ್ದಾರೆ.
ಚೆನ್ನೈನ ಭಾಭಾ ಪರಮಾಣು ಸಂಶೋಧನಾ ಕೇಂದ್ರದ ಸಹಾಯಕ ವಿಜ್ಞಾನಿಯಾಗಿರುವ ರಾಮ್ ಮಿಲನ್ ಅವರು ತಮ್ಮ ಪತ್ನಿ ಆರತಿ ಅವರ ಫೋನ್ ಎರಡು ದಿನಗಳಿಂದ ಸ್ವಿಚ್ ಆಫ್ ಆಗಿರುವುದನ್ನು ಕಂಡು, ಆತಂಕಗೊಂಡು ಡಿಸೆಂಬರ್ 7 ರಂದು ಮನೆಗೆ ಹೋಗಿ ಪರಿಶೀಲಿಸುವಂತೆ ತಮ್ಮ ಅತ್ತಿಯನ್ನು ಕಳುಹಿಸಿದ್ದಾರೆ. ಅವರು ಹೋಗಿ ನೋಡಿದಾಗ ಮನೆಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಹೀಗಾಗಿ ಮರುದಿನ ಸಂಜೆ ಗೋರಖ್‌ಪುರಕ್ಕೆ ಹಿಂದಿರುಗಿದ ರಾಮ್ ಮಿಲನ್ ಅವರು ನೆಲದ ಮೇಲೆ ತಮ್ಮ ಹೆಂಡತಿಯ ಶವ ನೋಡಿ ಪೊಲೀಸರು ತಿಳಿಸಿದ್ದಾರೆ.
ನಂತರ ಶಿವ ದೇವಾಲಯದ ಬಳಿ ಅವರ ಮಗ ಪತ್ತೆಯಾಗಿದ್ದು, ಆರಂಭದಲ್ಲಿ ತನ್ನ ತಾಯಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ಮತ್ತು ತಂದೆಗೆ ತಿಳಿಸಿದ್ದಾನೆ. ಗಾಬರಿಯಿಂದ ಮನೆಗೆ ಹೊರಗಿನಿಂದ ಬೀಗ ಹಾಕಿಕೊಂಡು ನಾಲ್ಕು ದಿನ ದಿಕ್ಕು ತೋಚದೆ ಅಲೆದಾಡಿದ್ದಾಗಿ ಆತ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಮರಣೋತ್ತರ ಪರೀಕ್ಷೆಯ ವರದಿಯು ಬಾಲಕನ ಹೇಳಿಕೆಗೆ ವಿರುದ್ಧವಾಗಿ ಬಂದಿದ್ದು, ಎರಡು ಕಡೆ ರಕ್ತದ ಕಲೆಗಳು ಮತ್ತು ದೇಹವನ್ನು ಎಳೆದುಕೊಂಡು ಹೋಗಿರುವುದು ಕಂಡುಬಂದಿದೆ. ಹೀಗಾಗಿ ಅನುಮಾನಗೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸಿದಾಗ ಬಾಲಕ ತನ್ನ ತಾಯಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.