ಮುಂಬೈ: ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಸಂಪುಟ ವಿಸ್ತರಣೆ ಡಿಸೆಂಬರ್ 15 ರಂದು ಭಾನುವಾರ ನಡೆಯಲಿದೆ. ನಾಗಪುರದ ಕಚೇರಿಯಲ್ಲಿ 15 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.
ಸುಮಾರು 30 ಸಚಿವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಮಹಾರಾಷ್ಟ್ರದ ಏರಡನೇ ರಾಜಧಾನಿಯಾಗಿರುವ ನಾಗಪುರದಲ್ಲಿ ಡಿಸೆಂಬರ್ 16 ರಿಂದ ವಾರದ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದೆ. ಡಿಸೆಂಬರ್ 5 ರಂದು ಮುಂಬೈಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಹಾಗೂ ಉಪ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ, ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದ್ದರು.
ಆದರೆ, ಮಹಾಯುತಿ ಮೈತ್ರಿ ಪಕ್ಷಗಳ ನಡುವಿನ ಅಧಿಕಾರ ಹಂಚಿಕೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಮತ್ತೊಂದೆಡೆ ಗೃಹ ಖಾತೆಗಾಗಿ ಏಕನಾಥ್ ಶಿಂಧೆ ಪಟ್ಟು ಹಿಡಿದಿದ್ದಾರೆ ಎಂಬಂತಹ ಮಾತುಗಳು ಕೇಳಿಬಂದಿದ್ದವು.
ಕೊನೆಗೂ ಅಧಿಕಾರ ಹಂಚಿಕೆಯನ್ನು ಬಿಜೆಪಿ, ಶಿವಸೇನಾ (ಶಿಂಧೆ ಬಣ) ಹಾಗೂ ಎನ್ ಸಿಪಿ ಪಕ್ಷಗಳು ಒಪ್ಪಿಕೊಂಡಿದ್ದು, ಭಾನುವಾರ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಸೇರಿದಂತೆ ಮಹಾರಾಷ್ಟ್ರ ಕ್ಯಾಬಿನೆಟ್ ನಲ್ಲಿ ಗರಿಷ್ಠ 43 ಸದಸ್ಯರನ್ನು ಹೊಂದಬಹುದಾಗಿದೆ.