ನವದೆಹಲಿ: ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ವಿವಾದಿತ ಹೇಳಿಕೆ ನೀಡಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರನ್ನು ವಾಗ್ದಂಡನೆಗೆ ಗುರಿಪಡಿಸಬೇಕು ಎಂದು ಕೋರಿ ಪ್ರತಿಪಕ್ಷಗಳು ರಾಜ್ಯಸಭೆಯಲ್ಲಿ ನೋಟಿಸ್ ನೀಡಿವೆ.
ಈ ನೋಟಿಸ್ ಗೆ ಕಪಿಲ್ ಸಿಬಲ್, ವಿವೇಕ್ ತಂಕಾ, ದಿಗ್ವಿಜಯ್ ಸಿಂಗ್, ಚಿದಂಬರಂ, ಜೈರಾಮ್ ರಮೇಶ್, ನಾಸೀರ್ ಹುಸೇನ್ ಸೇರಿದಂತೆ 55 ಸದಸ್ಯರು ಸಹಿ ಹಾಕಿದ್ದಾರೆ.
ಈ ಸದಸ್ಯರು ರಾಜ್ಯಸಭೆ ಪ್ರಧಾನ ಕಾರ್ಯದರ್ಶಿ ಅವರನ್ನು ಶುಕ್ರವಾರ ಭೇಟಿಯಾಗಿ ನೋಟಿಸ್ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನ್ಯಾಯಮೂರ್ತಿಗಳ ವಿಚಾರಣೆ ಕಾಯ್ದೆ 1968 ಮತ್ತು ಸಂವಿಧಾನದ ವಿಧಿ 218ರ ಅನ್ವಯ ನೋಟಿಸ್ ನೀಡಲಾಗಿದೆ.
ಭಾನುವಾರ ಅಲಹಾಬಾದ್ ನಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್, ಭಾರತ ಹಿಂದೂ ಬಹುಸಂಖ್ಯಾತರ ಆಶಯದಂತೆ ನಡೆಯುತ್ತಿದೆ ಎಂದು ಹೇಳಿದ್ದರು. ಅಲ್ಲದೇ ಮುಸ್ಲಿಂ ಸಮುದಾಯದ ವಿರುದ್ಧ ಆಕ್ಷೇಪಾರ್ಹಕಾರಿ ಮಾತುಗಳನ್ನಾಡಿದ್ದರು. ನ್ಯಾಯಾಧೀಶರ ಭಾಷಣದ ಬಗ್ಗೆ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.