ಲಖನೌ: ಪಾಕಿಸ್ತಾನ ಪರ ಗೂಢಚರ್ಯೆ ಆರೋಪದ ಮೇಲೆ ಜೂನ್ 2002ರಲ್ಲಿ ಬಂಧಿತರಾಗಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶದ ಹಿರಿಯ ನ್ಯಾಯಿಕ ಸೇವೆ ( HIS) ಜಡ್ಜ್ ಆಗಿ ನೇಮಕ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ಅಲ್ಲಿನ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಪಾಕ್ ಪರ ಗೂಢಚರ್ಯೆ ಆರೋಪದಿಂದ 46 ವರ್ಷದ ಕಾನ್ಫುರ ನಿವಾಸಿ ಪ್ರದೀಪ್ ಕುಮಾರ್ ಅವರ ಆಯ್ಕೆಯನ್ನು ತಡೆಹಿಡಿಯಲಾಗಿದ್ದ ಏಳು ವರ್ಷದ ನಂತರ ಹೈಕೋರ್ಟ್ ಈ ಆದೇಶ ನೀಡಿದೆ.
ಹಣದ ಆಮಿಷಕ್ಕೆ ಬಲಿಯಾಗಿ ಗಡಿಯಲ್ಲಿನ ಸೇನೆ ನಿಯೋಜನೆ ಮತ್ತಿತರ ರಹಸ್ಯ ಮಾಹಿತಿಯನ್ನು ತನ್ನ ಹ್ಯಾಂಡಲ್ಸ್ ಗಳಿಗೆ ಹಂಚಿಕೊಂಡ ಆರೋಪದ ಮೇರೆಗೆ ಕುಮಾರ್ ಅವರನ್ನು 2002ರಲ್ಲಿ ಬಂಧಿಸಲಾಗಿತ್ತು. ಅವರ ವಿರುದ್ಧದ ಎಲ್ಲಾ ಆರೋಪಗಳು ಕಾನ್ಫುರ ಕೋರ್ಟ್ ನಿಂದ 2014ರಲ್ಲಿ ಬಗೆಹರಿದಿತ್ತು. ಆದರೆ, ಅದು ದಶಕಗಳ ಕಾಲದ ಹೋರಾಟವನ್ನು ತೆಗೆದುಕೊಂಡಿತ್ತು. ಕುಮಾರ್ ವಿರುದ್ಧ ರಾಷ್ಟ್ರ ವಿರೋಧಿ ಆರೋಪ ಕೇಳಿಬಂದಾಗ ಅವರಿಗೆ 24 ವರ್ಷ ವಯಸ್ಸಾಗಿತ್ತು. ನಿರುದ್ಯೋಗಿ ವಕೀಲರಾಗಿದ್ದರು.
ಕಾನ್ಪುರ ನ್ಯಾಯಾಲಯದಿಂದ ದೋಷಮುಕ್ತಗೊಂಡ ನಂತರ, ಕುಮಾರ್ ಪಿಸಿಎಸ್ (ಜೆ) (ಯುಪಿ ನ್ಯಾಯಾಂಗ ಸೇವೆಗಳು) ಪರೀಕ್ಷೆ ಬರೆದಿದ್ದರು. 2016ರಲ್ಲಿ ಅವರು ಹಿರಿಯ ನ್ಯಾಯಿಕ ಸೇವೆಗೆ ಆಯ್ಕೆಯಾಗಿದ್ದರು. ಆದಾಗ್ಯೂ, ಅವರ ಹಿಂದಿನ ಆರೋಪಗಳನ್ನು ಉಲ್ಲೇಖಿಸಿ ನೇಮಕಾತಿಯನ್ನು ತಡೆಹಿಡಿಯಲಾಗಿತ್ತು. ಕುಮಾರ್ ಅವರ ವಿರುದ್ಧ ಬೇಹುಗಾರಿಕೆ, ದೇಶದ್ರೋಹ, ಕ್ರಿಮಿನಲ್ ಪಿತೂರಿ ಮತ್ತು ಅಧಿಕೃತ ರಹಸ್ಯ ಕಾಯ್ದೆಯ ವಿವಿಧ ನಿಬಂಧನೆಗಳಡಿ 2004 ಮತ್ತು 2007ರಲ್ಲಿ ಎರಡು ಅಪರಾಧಗಳಲ್ಲಿ ವಿಚಾರಣೆ ಎದುರಿಸಿದ್ದರು. ಅವೆರೆಡೂ ಖುಲಾಸೆಯಾಗಿವೆ.
2014ರಲ್ಲಿ ಕುಮಾರ್ ಅವರನ್ನು ಆರೋಪ ಮುಕ್ತಗೊಳಿಸಿದ ಕಾನ್ಫುರ ನ್ಯಾಯಾಲಯ, ಈ ಪ್ರಕರಣದಲ್ಲಿ ಸರ್ಕಾರದ ವಿರುದ್ಧದ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ. ಹೀಗಾಗಿ ಅವರನ್ನು ನ್ಯಾಯಿಕ ಸೇವೆಗೆ ನೇಮಕ ಮಾಡುವಂತೆ ನಿರ್ದೇಶನ ನೀಡಿತ್ತು. ಈ ತೀರ್ಪುಗಳ ಹೊರತಾಗಿಯೂ ಅವರನ್ನು ನ್ಯಾಯಾಂಗ ಹುದ್ದೆಗೆ ನೇಮಿಸಲು ರಾಜ್ಯ ಸರ್ಕಾರ ನಿರಾಕರಿಸಿತ್ತು. ರಾಜ್ಯದ ನಿರಂತರ ಅನುಮಾನಕ್ಕೆ ಪ್ರತಿಕ್ರಿಯೆ ನೀಡಿರುವ ನ್ಯಾಯಾಲಯ, ಕುಮಾರ್ ಅವರ ನಡತೆಯನ್ನು ಎರಡು ವಾರಗಳಲ್ಲಿ ಪರಿಶೀಲಿಸುವಂತೆ ಹಾಗೂ ಜನವರಿ 15, 2025 ರೊಳಗೆ ಅವರ ನೇಮಕಾತಿ ಪತ್ರವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದೆ.