ಪಾಟ್ನಾ: ಶಾಲೆಗೆ ತೆರಳುತ್ತಿದ್ದ ಶಿಕ್ಷಕನೋರ್ವನನ್ನು ಗುಂಪೊಂದು ಅಪಹರಿಸಿ ಗನ್ ತೋರಿಸಿ ದೇಗುಲದಲ್ಲಿ ಯುವತಿಯೊಂದಿಗೆ ಮದುವೆ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಬಿಹಾರದ ಲಖಿಸರೈನಲ್ಲಿ ಈ ಘಟನೆ ನಡೆದಿದ್ದು, ಕೆಲಸಕ್ಕಾಗಿ ಶಾಲೆಗೆ ಹೋಗುತ್ತಿದ್ದ ಶಿಕ್ಷಕನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿ ಸಮೀಪದ ದೇಗುಲದಲ್ಲಿ ಯುವತಿಯೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ.
ಇತ್ತೀಚೆಗಷ್ಟೇ ಬಿಹಾರ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಅವನೀಶ್ ಕುಮಾರ್ ಎಂಬುವವರು ತಾವು ಕೆಲಸ ಮಾಡುತ್ತಿದ್ದ ಶಾಲೆಗೆ ಹೋಗುತ್ತಿದ್ದಾಗ 2 ಸ್ಕಾರ್ಪಿಯೋ ಕಾರಿನಲ್ಲಿ ಬಂದ ಯುವತಿ ಕಡೆಯವರು ಆಟೋದಲ್ಲಿ ಹೋಗುತ್ತಿದ್ದ ಅವನೀಶ್ ಕುಮಾರ್ ರನ್ನು ಅಡ್ಡಗಟ್ಟಿದ್ದಾರೆ.
ಬಳಿಕ ಬಂದೂಕು ತೋರಿಸಿ ಅವರನ್ನು ಕಾರಿಗೆ ಹತ್ತಿಸಿಕೊಂಡು ಅಲ್ಲಿಂದ ಕರೆದುಕೊಂಡು ಹೋಗಿ ಯುವತಿಯೊಂದಿಗೆ ಬಲವಂತದ ವಿವಾಹ ಮಾಡಿಸಿದ್ದಾರೆ.
ಏನಿದು ಘಟನೆ?
ಬಿಹಾರದ ಬೇಗುರ್ಸರೈ ಜಿಲ್ಲೆಯ ರಾಜೌರಾ ನಿವಾಸಿ ಸುಧಾಕರ್ ರೈ ಅವರ ಮಗ ಅವನೀಶ್ ಕುಮಾರ್ ನನ್ನು ಲಖಿಸರೈ ಜಿಲ್ಲೆಯ ಗುಂಜನ್ ಎಂಬ ಮಹಿಳೆಯ ಸಂಬಂಧಿಕರು ಅಪಹರಿಸಿ ಆಕೆಯೊಂದಿಗೆ ಮದುವೆ ಮಾಡಿಸಿದ್ದಾರೆ. ಸಂಬಂಧಿಕರು ಆರೋಪಿಸಿರುವಂತೆ ಅಶ್ವಿನ್ ಮತ್ತು ಗುಂಜನ್ ನಾಲ್ಕು ವರ್ಷಗಳ ಕಾಲ ಸಂಬಂಧ ಹೊಂದಿದ್ದರು.
ಈ ನಡುವೆ ಬಿಹಾರ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಅವನೀಶ್ ಕುಮಾರ್ ಗೆ ಸರ್ಕಾರಿ ಉದ್ಯೋಗ ದೊರೆತಿತ್ತು. ಕತಿಹಾರ್ ಜಿಲ್ಲೆಯ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕನಾಗಿ ನೇಮಕಗೊಂಡಿದ್ದ. ಕೆಲಸ ಸಿಕ್ಕ ಖುಷಿಯಲ್ಲಿ ಯುವತಿ ತನ್ನನ್ನು ಮದುವೆಯಾಗು ಎಂದು ಅವನೀಶ್ ಗೆ ಕೇಳಿದ್ದು ಈ ವೇಳೆ ಆತ ಮದುವೆಗೆ ನಿರಾಕರಿಸಿದ್ದಾನೆ ಎಂದು ಯುವತಿ ಗುಂಜನ್ ಹೇಳಿದ್ದಾರೆ.
'ನಾವು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಅವರು ನನ್ನನ್ನು ಅವರ ಶಾಲೆಗೆ ಕೂಡ ಕರೆದೊಯ್ದಿದ್ದರು. ಮದುವೆಯಾಗುವ ಭರವಸೆ ನೀಡಿ ಅವನೀಶ್ ತನ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಸಾಕಷ್ಟು ಬಾರಿ ಹೊಟೆಲ್ ನಲ್ಲಿ ಭೇಟಿಯಾಗಿದ್ದೆವು. ಕತಿಹಾರ್ ನಲ್ಲಿರುವ ಅವರ ನಿವಾಸದಲ್ಲೂ ಅವನೀಶ್ ನನ್ನನ್ನು ಕರೆಸಿಕೊಂಡು ಜಂಟಿ ವಾಸ್ತವ್ಯ ಹೂಡಿದ್ದ. ಆದರೆ ಮದುವೆ ವಿಚಾರ ಪ್ರಸ್ತಾಪಿಸಿದಾಗ ನಿರಾಕರಿಸಿದ್ದ. ಈ ಕುರಿತು ನನ್ನ ಪೋಷಕರಿಗೆ ತಿಳಿಸಿದ್ದೆ' ಎಂದು ಗುಂಜನ್ ಹೇಳಿದ್ದಾರೆ.
ಇನ್ನು ಯುವತಿ ಗುಂಜನ್ ಆರೋಪಗಳನ್ನು ಅವನೀಶ್ ಕುಮಾರ್ ನಿರಾಕರಿಸಿದ್ದು, ನನಗೆ ಆ ಹುಡುಗಿಯ ಮೇಲೆ ಯಾವುದೇ ಪ್ರೀತಿ ಇರಲಿಲ್ಲ. ಅವಳು ಪದೇ ಪದೇ ಕರೆ ಮಾಡಿ ನನ್ನನ್ನು ಹಿಂಬಾಲಿಸುವ ಮೂಲಕ ಕಿರುಕುಳ ನೀಡಿದ್ದಳು. ಘಟನೆಯ ದಿನ, ನಾನು ಶಾಲೆಗೆ ಹೋಗುತ್ತಿದ್ದಾಗ ಕೆಲವು ಪುರುಷರು ಸ್ಕಾರ್ಪಿಯೋ ವಾಹನದಲ್ಲಿ ನನ್ನನ್ನು ಅಪಹರಿಸಿ ನನ್ನನ್ನು ಹೊಡೆದರು.
ಬಲವಂತವಾಗಿ ನನ್ನಿಂದ ಆಕೆಗೆ ಸಿಂಧೂರವನ್ನು ಹಚ್ಚಿಸಿದರು ಮತ್ತು ಆಚರಣೆಗಳನ್ನು ಮಾಡಲು ಪ್ರಯತ್ನಿಸಿದರು. ನಾನು ಎಲ್ಲದಕ್ಕೂ ಪ್ರತಿಭಟಿಸಿದ್ದೆ. ಆದರೂ ದೇವಸ್ಥಾನದಲ್ಲಿ ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ತನಗೆ ನ್ಯಾಯ ಬೇಕು ಎಂದು ಅವನೀಶ್ ಕುಮಾರ್ ಆರೋಪಿಸಿದ್ದಾನೆ.
ವಿವಾಹದ ಬಳಿಕ ರಾಜೌರಾದಲ್ಲಿರುವ ಅವ್ನಿಶ್ ಮನೆಗೆ ಗುಂಜನ್ ರನ್ನು ಕರೆದೊಯ್ದಾಗ ಅವ್ನಿಶ್ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಅಂತೆಯೇ ಅವನೀಶ್ ಕುಟುಂಬ ಗುಂಜನ್ ಳನ್ನು ತಮ್ಮ ಸೊಸೆಯಾಗಿ ಸ್ವೀಕರಿಸಲು ನಿರಾಕರಿಸಿದ್ದು, ಇದೀಗ ಕುಂಜನ್ ಅತಂತ್ರ ಸ್ಥಿತಿಗೆ ಸಿಲುಕಿದ್ದಾಳೆ. ಗುಂಜನ್ ನ್ಯಾಯಕ್ಕಾಗಿ ಬೇಡಿಕೊಂಡು ಪೊಲೀಸರಿಗೆ ದೂರು ನೀಡಿದ್ದು, ಅಪಹರಣ ಮತ್ತು ದೈಹಿಕ ಹಲ್ಲೆಯ ಆರೋಪದ ಮೇಲೆ ಅವನೀಶ್ ಕೂಡ ದೂರು ದಾಖಲಿಸಿದ್ದಾರೆ.
30 ವರ್ಷಗಳಲ್ಲೇ ಅತೀ ಹೆಚ್ಚು ಬಲವಂತದ ಮದುವೆ
ಇನ್ನು ಬಿಹಾರದ ಇತಿಹಾಸದಲ್ಲೇ ಅತೀ ಹೆಚ್ಚು ಬಲವಂತದ ಮದುವೆಗಳು 2024ರಲ್ಲಿ ನಡೆದಿದೆ ಎನ್ನಲಾದಿದೆ. ಕಳೆದ 30 ವರ್ಷಗಳಲ್ಲೇ 2024ರಲ್ಲಿ ಅತೀ ಹೆಚ್ಚು ಬಲವಂತದ ಮದುವೆಗಳಾಗಿವೆ ಎನ್ನಲಾಗಿದೆ.