ನವದೆಹಲಿ: ಅಂಬೇಡ್ಕರ್ ವಿಚಾರವಾಗಿ ಸಂಸತ್ತಿನಲ್ಲಿ ಇಂದು ನಡೆದ ಸರಣಿ ಪ್ರತಿಭಟನೆ ವೇಳೆ ಹಲ್ಲೆ ನಡೆಸಲಾಗಿದೆ ಎಂದು ಆಡಳಿತಾರೂಢ ಬಿಜೆಪಿ ಆರೋಪಿಸಿದೆ. ಹಲ್ಲೆ, ಬೆದರಿಕೆಗಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿರುವುದಾಗಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಗುರುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ವಿರುದ್ಧ ಸೆಕ್ಷನ್ 109 (ಕೊಲೆಗೆ ಯತ್ನ) 115, 117,125,131, 351 ಅಡಿಯಲ್ಲಿ ದೂರು ದಾಖಲಿಸಲಾಗಿದ್ದು, ಸಂಸತ್ತಿನ ಹೊರಗಡೆ ಎನ್ ಡಿಎ ಸಂಸದರು ಶಾಂತಯುತವಾಗಿ ನಡೆಸುತ್ತಿದ್ದ ಪ್ರತಿಭಟನೆ ವೇಳೆಯಲ್ಲಿ ನಡೆದ ಘಟನೆಯನ್ನು ಸಮಗ್ರವಾಗಿ ವಿವರಿಸಲಾಗಿದೆ ಎಂದು ಅವರು ಹೇಳಿದರು.
ಸಂಸತ್ತಿನಲ್ಲಿ ಎನ್ ಡಿಎ ಹಾಗೂ ಇಂಡಿಯಾ ಒಕ್ಕೂಟ ಪಕ್ಷಗಳ ಪ್ರತಿಭಟನೆ ವೇಳೆಯಲ್ಲಿ ಇಬ್ಬರು ಬಿಜೆಪಿ ಸಂಸದರು ಗಾಯಗೊಂಡಿದ್ದರು. ಗಾಯಗೊಂಡಿದ್ದ ಪ್ರತಾಪ್ ಸಾರಂಗಿ ಮತ್ತು ಮುಕೇಶ್ ರಜಪೂತ್ ಎಂಬ ಸಂಸದರನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ತಲೆಗೆ ಗಾಯವಾಗಿದೆ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಕೀಯ ಅಧೀಕ್ಷಕ ಅಜಯ್ ಶುಕ್ಲಾ ಹೇಳಿದ್ದಾರೆ.
ಗುರುವಾರ ಬೆಳಗ್ಗೆ ಸಂಸತ್ ಹಾಗೂ ಸಂಸತ್ತಿನ ಹೊರಗೆ ಎನ್ ಡಿಎ ಹಾಗೂ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದವು. ಕಾಂಗ್ರೆಸ್ ಪಕ್ಷ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದೆ ಎಂದು ಆರೋಪಿಸಿ ಆಡಳಿತಾರೂಢ ಬಿಜೆಪಿ ಸಂಸದರು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸಂಸತ್ತಿನ ಒಳಗಡೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಪಕ್ಷಗಳು ಅಂಬೇಡ್ಕರ್ ಕುರಿತ ಹೇಳಿಕೆಗಾಗಿ ಅಮಿತ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದವು.
ಮತ್ತೊಂದೆಡೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಬಿಜೆಪಿ ನಾಯಕರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಗುರುವಾರ ಸಂಸತ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ದಿಗ್ವಿಜಯ ಸಿಂಗ್, ಮುಕುಲ್ ವಾಸ್ನಿಕ್, ರಾಜೀವ್ ಶುಕ್ಲಾ, ಪ್ರಮೋದ್ ತಿವಾರಿ ಸೇರಿದಂತೆ ಕಾಂಗ್ರೆಸ್ ಸಂಸದರ ನಿಯೋಗ ಖುದ್ದು ದೂರು ಸಲ್ಲಿಸಿದೆ. ಪೊಲೀಸರು ದೂರಿನ ಸ್ವೀಕೃತಿಯನ್ನು ಖಚಿತಪಡಿಸಿದ್ದು, ಆರೋಪಗಳನ್ನು ಪರಿಶೀಲಿಸುತ್ತಿರುವುದಾಗಿ ತಿಳಿಸಿದ್ದಾರೆ.