ಕೆಟಿ ರಾಮಾರಾವ್ 
ದೇಶ

Formula E Corruption case: ತೆಲಂಗಾಣ ಮಾಜಿ ಸಚಿವ KTR ಗೆ ಸಂಕಷ್ಟ; ಬಹು ಕೋಟಿ ಅಕ್ರಮ ಪ್ರಕರಣದಲ್ಲಿ ಎ1 ಆರೋಪಿ!

ತೆಲಂಗಾಣದ ಹಿಂದಿನ ಬಿಆರ್‌ಎಸ್‌ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಫಾರ್ಮುಲಾ ಇ ರೇಸ್‌ನಲ್ಲಿ ಹಣಕಾಸು ಅವ್ಯವಹಾರ ಆರೋಪಗಳಿಗೆ ಸಂಬಂಧಿಸಿದಂತೆ ಕೆ.ಟಿ. ರಾಮರಾವ್‌ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಜಿಷ್ಣುದೇವ್‌ ವರ್ಮಾ ಅವರು ಬುಧವಾರ ಅನುಮತಿ ನೀಡಿದ್ದಾರೆ.

ಹೈದರಾಬಾದ್: ಭಾರತ್‌ ರಾಷ್ಟ್ರ ಸಮಿತಿ (BRS) ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಪುತ್ರ ಕೆಟಿ ರಾಮಾರಾವ್ (KTR)ಗೆ ಸಂಕಷ್ಟ ಎದುರಾಗಿದ್ದು, ಬಹುಕೋಟಿ Formula E race ಭ್ರಷ್ಟಾಚಾರ ಪ್ರಕರಣದಲ್ಲಿ ಅವರನ್ನು ಎ1 ಆರೋಪಿಯನ್ನಾಗಿ ಮಾಡಲಾಗಿದೆ.

ಹೌದು.. ತೆಲಂಗಾಣದ ಹಿಂದಿನ ಬಿಆರ್‌ಎಸ್‌ (ಭಾರತ್‌ ರಾಷ್ಟ್ರ ಸಮಿತಿ) ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಫಾರ್ಮುಲಾ ಇ ರೇಸ್‌ನಲ್ಲಿ ಹಣಕಾಸು ಅವ್ಯವಹಾರ ಆರೋಪಗಳಿಗೆ ಸಂಬಂಧಿಸಿದಂತೆ ಬಿಆರ್‌ಎಸ್‌ ಶಾಸಕ, ಮಾಜಿ ಸಚಿವ ಕೆ.ಟಿ. ರಾಮರಾವ್‌ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಜಿಷ್ಣುದೇವ್‌ ವರ್ಮಾ ಅವರು ಬುಧವಾರ ಅನುಮತಿ ನೀಡಿದ್ದಾರೆ.

ಇದರೊಂದಿಗೆ ಬಿಆರ್‌ಎಸ್‌ ಕಾರ್ಯಾಧ್ಯಕ್ಷರೂ ಆಗಿರುವ ಕೆಟಿಆರ್‌ಗೆ ಸಂಕಟ ಎದುರಾಗಿದ್ದು, ಕೆ.ಟಿ. ರಾಮರಾವ್‌ ಅವರು ಪೌರಾಡಳಿತ ಸಚಿವರಾಗಿದ್ದ ಸಂದರ್ಭದಲ್ಲಿ ನಿಯಮಗಳನ್ನು ಅನುಸರಿಸದೇ ಫಾರ್ಮುಲಾ ಇ ರೇಸ್‌ ಆಯೋಜಕರಿಗೆ 55 ಕೋಟಿ ರೂ. ವರ್ಗಾಯಿಸಲು ಅನುಮತಿ ನೀಡಿದ್ದರು. ಇದರಲ್ಲಿಅಕ್ರಮಗಳು ನಡದಿವೆ ಎಂದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಆರೋಪಿಸಿದೆ. ಈಗ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಎಸಿಬಿ ತನಿಖೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಎಸಿಬಿ ಮೂಲಗಳ ಪ್ರಕಾರ, ಕೆಟಿ ರಾಮಾರಾವ್ ಅಲ್ಲದೆ ಆಗಿನ ಪುರಸಭೆ ಆಡಳಿತ ವಿಶೇಷ ಮುಖ್ಯ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಅರವಿಂದ್ ಕುಮಾರ್ ಅವರನ್ನು ಆರೋಪಿ-2 (ಎ-2), ಮುಖ್ಯ ಎಂಜಿನಿಯರ್ ಬಿಎಲ್‌ಎನ್ ರೆಡ್ಡಿ ಅವರನ್ನು ಆರೋಪಿ-3 (ಎ-3) ಎಂದು ಹೆಸರಿಸಲಾಗಿದೆ. ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(1)(ಎ) ಮತ್ತು 13(2)(ಎ) ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 409 ಮತ್ತು 120(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ORR ಪ್ರಕರಣದ ತನಿಖೆಗೆ SIT

ಇದೇ ವೇಳೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಹೊರ ವರ್ತುಲ ರಸ್ತೆ (ಒಆರ್‌ಆರ್) ಗುತ್ತಿಗೆ ಟೆಂಡರ್‌ಗಳಲ್ಲಿನ ಅಕ್ರಮಗಳ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವುದಾಗಿ ಘೋಷಿಸಿದ್ದು, 'ತೆಲಂಗಾಣ ಸರ್ಕಾರವು ORR ಗುತ್ತಿಗೆಯ ಬಗ್ಗೆ SIT ತನಿಖೆಗೆ ಆದೇಶಿಸುತ್ತದೆ. ಸಂಪುಟ ಸಭೆಯು ತನಿಖೆಗೆ ಮಾರ್ಗಸೂಚಿಗಳನ್ನು ನಿರ್ಧರಿಸುತ್ತದೆ" ಎಂದು ಹೇಳಿದರು.

ವಿಧಾನಸಭೆಯಲ್ಲಿ ಚರ್ಚಿಸಲಿ: ಕೆಟಿಆರ್ ಸವಾಲು

ಇನ್ನು ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಅನುಮತಿ ದೊರೆತ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಟಿ ರಾಮಾರಾವ್ ಅವರು, 'ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರಕಾರದಿಂದ ಅನುದಾನ ಪಡೆಯಲು ವಿಫಲವಾಗಿರುವ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ನೇತೃತ್ವದ ಕಾಂಗ್ರೆಸ್‌ ಸರಕಾರವು ಪ್ರತಿಪಕ್ಷಗಳ ನಾಯಕರ ವಿರುದ್ಧ ಪ್ರಕರಣಗಳನ್ನು ದಾಖಲಿಸುವತ್ತ ಉತ್ಸಾಹ ತೋರುತ್ತಿದೆ. ನನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದಕ್ಕೆ ನಾನೇನೂ ವಿಚಲಿತಗೊಳ್ಳುವುದಿಲ್ಲ. ಕಾನೂನು ಬದ್ಧವಾಗಿಯೇ ಎದುರಿಸುತ್ತೇನೆ' ಎಂದು ಹೇಳಿದ್ದಾರೆ.

ಅಂತೆಯೇ ಕೊಠಡಿಯಲ್ಲಿ ಬಾಗಿಲು ಹಾಕಿಕೊಂಡು ಚರ್ಚೆ ನಡೆಸುವ ಬದಲು, ರಾಜ್ಯ ವಿಧಾನಸಭೆಯಲ್ಲಿ ಚರ್ಚೆ ನಡೆಸುವ ಮೂಲಕ ತೆಲಂಗಾಣದ ನಾಲ್ಕು ಕೋಟಿ ಜನರ ಮುಂದೆ ಈ ವಿಷಯದ ಸತ್ಯವನ್ನು ತೆರೆದಿಡಬೇಕು. ಫಾರ್ಮುಲಾ-ಇ ರೇಸ್‌ನಲ್ಲಿ ಯಾವುದೇ ಅಕ್ರಮಗಳು ಅಥವಾ ಭ್ರಷ್ಟಾಚಾರ ನಡೆದಿಲ್ಲ. ಒಪ್ಪಂದವು ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆದಿದ್ದು, ಸಂಘಟಕರಿಗೆ ಎಲ್ಲಾ ಪಾವತಿಗಳನ್ನು ಪಾರದರ್ಶಕ ರೀತಿಯಲ್ಲಿ ಮಾಡಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT