ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿನ ಮಲ್ಟಿಪ್ಲೆಕ್ಸ್‌ವೊಂದರಲ್ಲಿ ತಡರಾತ್ರಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ 2' ಸಿನಿಮಾ ವೀಕ್ಷಿಸುತ್ತಿದ್ದ ಪ್ರೇಕ್ಷಕರು ರಿಯಲ್ ಸಾಹಸ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಹೌದು, ರಿಲ್ಯಾಕ್ಸ್ ಮೂಡ್‌ನಲ್ಲಿ ಸಿನಿಮಾ ವೀಕ್ಷಿಸುತ್ತಿದ್ದ ಕೊಲೆ ಮತ್ತು ಮಾದಕವಸ್ತು ಪ್ರಕರಣಗಳಲ್ಲಿ ಬೇಕಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪುಷ್ಪ 2 ಸಿನಿಮಾ ಇದೀಗ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಗುರುವಾರ ಮಧ್ಯರಾತ್ರಿ ವಿಶಾಲ್ ಮೆಶ್ರಾಮ್ ಎಂಬಾತನ ಬಂಧನವು ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರಿಗೆ ದಿಗ್ಭ್ರಮೆ ಉಂಟುಮಾಡಿದೆ. ಚಿತ್ರಮಂದಿರದೊಳಗೆ ನುಗ್ಗಿದ ಪೊಲೀಸರು, ಆರೋಪಿಯನ್ನು ಬಂಧಿಸಿ ಕರೆದೊಯ್ದ ಬಳಿಕ ಪ್ರೇಕ್ಷಕರು ಸಿನಿಮಾ ವೀಕ್ಷಿಸುವುದನ್ನು ಮುಂದುವರಿಸಬಹುದು ಎಂದು ಎಂದು ಭರವಸೆ ನೀಡಿದರು.
ಮೆಶ್ರಾಮ್ 10 ತಿಂಗಳ ಕಾಲ ಪೊಲೀಸರಿಂದ ತಲೆಮರೆಸಿಕೊಂಡಿದ್ದ. ಆದರೆ, ಇತ್ತೀಚೆಗಷ್ಟೇ ಬಿಡುಗಡೆಯಾದ ಪುಷ್ಪ 2 ಸಿನಿಮಾ ವೀಕ್ಷಿಸಲು ಆತ ಉತ್ಸುಕನಾಗಿರುವ ಬಗ್ಗೆ ಮಾಹಿತಿ ತಿಳಿದಿದ್ದ ಪೊಲೀಸರು ಚಿತ್ರಮಂದಿರದಲ್ಲೇ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪಚ್‌ಪೋಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಆರೋಪಿ ವಿರುದ್ಧ ಎರಡು ಕೊಲೆ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ 27 ಪ್ರಕರಣಗಳಿವೆ. ಆತ ಹಿಂಸಾತ್ಮಕ ಪ್ರವೃತ್ತಿಗೆ ಹೆಸರುವಾಸಿಯಾಗಿದ್ದನು ಮತ್ತು ಈ ಹಿಂದೆ ಪೊಲೀಸರ ಮೇಲೆ ದಾಳಿ ನಡೆಸಿದ್ದನು ಎಂದು ಅವರು ಹೇಳಿದರು.
ಅಧಿಕಾರಿಗಳು ಸೈಬರ್ ಕಣ್ಗಾವಲು ಮತ್ತು ಎಸ್‌ಯುವಿಯಲ್ಲಿ ಆತನ ಚಲನವಲನಗಳನ್ನು ಗಮನಿಸುತ್ತಾ ಹಿಂಬಾಲಿಸುತ್ತಿದ್ದರು. ಚಿತ್ರದ ಕ್ಲೈಮ್ಯಾಕ್ಸ್ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಚಿತ್ರಮಂದಿರದೊಳಗೆ ಪ್ರವೇಶಿಸಿದ್ದು, ಆ ಸಮಯದಲ್ಲಿ ಆರೋಪಿ ಮೆಶ್ರಾಮ್ ಚಿತ್ರ ವೀಕ್ಷಣೆಯಲ್ಲಿ ಸಂಪೂರ್ಣ ಮಗ್ನನಾಗಿದ್ದ. ಕೂಡಲೇ ಪೊಲೀಸರು ಆತನನ್ನು ಸುತ್ತುವರಿದು ಬಂಧಿಸಿದ್ದಾರೆ. ಆತ ಪ್ರತಿರೋಧಿಸಲು ಯಾವುದೇ ಅವಕಾಶವನ್ನು ನೀಡಿಲ್ಲ ಎಂದು ಅಧಿಕಾರಿ ಹೇಳಿದರು.
ಸದ್ಯ ಮೆಶ್ರಾಮ್ ನನ್ನು ನಾಗ್ಪುರದ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದ್ದು, ಶೀಘ್ರದಲ್ಲೇ ನಾಸಿಕ್ ಜೈಲಿಗೆ ವರ್ಗಾಯಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪುಷ್ಪ 2 ಸಿನಿಮಾ ಹಿಂದಿ, ತಮಿಳು, ಕನ್ನಡ, ಬೆಂಗಾಲಿ ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ಬಿಂಗ್ ಆವೃತ್ತಿಗಳೊಂದಿಗೆ ಡಿಸೆಂಬರ್ 5 ರಂದು ದೇಶದಾದ್ಯಂತ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.