ನವದೆಹಲಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನೂತನ ಅಧ್ಯಕ್ಷರಾಗಿ ಸುಪ್ರೀಂಕೋರ್ಟ್ ನ ಮಾಜಿ ನ್ಯಾಯಮೂರ್ತಿ ವಿ. ರಾಮಸುಬ್ರಮಣಿಯನ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ನೇಮಿಸಿದ್ದಾರೆ.
ಅಲ್ಲದೇ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ಪ್ರಿಯಾಂಕ್ ಕಾನೊಂಗೊ ಮತ್ತು ಮಾಜಿ ನ್ಯಾಯಮೂರ್ತಿ ವಿದ್ಯುತ್ ರಂಜನ್ ಸಾರಂಗಿ ಅವರನ್ನು NHRC ಸದಸ್ಯರನ್ನಾಗಿ ನೇಮಿಸಲಾಗಿದೆ.
ಆಯೋಗದ ನೂತನ ಅಧ್ಯಕ್ಷರ ಆಯ್ಕೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಡಿಸೆಂಬರ್ 18 ರಂದು ಸಭೆ ಸೇರಿ ಚರ್ಚಿಸಿತ್ತು. ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಸಭೆಯಲ್ಲಿ ಭಾಗವಹಿಸಿದ್ದರು.
ಈ ಮಧ್ಯೆ NHRC ನೂತನ ಮುಖ್ಯಸ್ಥರ ಆಯ್ಕೆ ಪ್ರಕ್ರಿಯೆ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಆಯ್ಕೆ ಸಮಿತಿಯು ಅಳವಡಿಸಿಕೊಂಡ ಆಯ್ಕೆ ಪ್ರಕ್ರಿಯೆಯು ದೋಷಪೂರಿತವಾಗಿದೆ ಎಂದು ಹೇಳಿದೆ. ಇದಕ್ಕೆ ಅನೇಕ ಕಾರಣಗಳನ್ನು ನೀಡಿದೆ. ಪೂರ್ವ ನಿರ್ಧರಿತದಂತೆ ಆಯ್ಕೆ ಮಾಡಲಾಗಿದ್ದು, ಪರಸ್ಪರ ಸಮಾಲೋಚನೆ ಮತ್ತು ಒಮ್ಮತದ ಸಂಪ್ರದಾಯವನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದೆ.
NHRC ಎಲ್ಲಾ ನಾಗರಿಕರ ಮೂಲಭೂತ ಮಾನವ ಹಕ್ಕುಗಳನ್ನು ವಿಶೇಷವಾಗಿ ಸಮಾಜದ ತುಳಿತಕ್ಕೊಳಗಾದ ಮತ್ತು ಅಂಚಿನಲ್ಲಿರುವ ವರ್ಗಗಳಿಂದ ರಕ್ಷಿಸುವ ಕಾರ್ಯವನ್ನು ಹೊಂದಿರುವ ಪ್ರಮುಖ ಶಾಸನಬದ್ಧ ಸಂಸ್ಥೆಯಾಗಿದೆ. ಅರ್ಹತೆ ಮತ್ತು ಒಳಗೊಳ್ಳುವಿಕೆಯ ಅಗತ್ಯತೆ ಎರಡನ್ನೂ ಗಮನದಲ್ಲಿಟ್ಟುಕೊಂಡು ನ್ಯಾಯಮೂರ್ತಿ ರೋಹಿಂಟನ್ ಫಾಲಿ ನಾರಿಮನ್ ಮತ್ತು ನ್ಯಾಯಮೂರ್ತಿ ಕುಟ್ಟಿಯಿಲ್ ಮ್ಯಾಥ್ಯೂ ಜೋಸೆಫ್ ಅವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಹಾಗೂ ನ್ಯಾಯಾಧೀಶರಾದ ಎಸ್. ಮುರುಳೀಧರ್ ಮತ್ತು ಅಕಿಲ್ ಅಬ್ದುಲ್ ಹಮೀದ್ ಖುರೇಷಿ ಅವರ ಹೆಸರನ್ನು ಸದಸ್ಯರಾಗಿ ನೇಮಿಸುವಂತೆ ಪ್ರಸ್ತಾಪಿಸಿದ್ದೇವು. ಆದರೆ ನಮ್ಮ ಪ್ರಸ್ತಾಪವನ್ನು ಆಯ್ಕೆ ಸಮಿತಿಯಲ್ಲಿ ತಿರಸ್ಕರಿಸಿರುವುದು ತುಂಬಾ ವಿಷಾದನೀಯ ಸಂಗತಿಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.