ಮುಂಬೈ: ಭಾರತದಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಲೇ ಇದ್ದು ಮತ್ತೆ 10 ಮಂದಿ ಅಕ್ರಮ ಬಾಂಗ್ಲಾ ವಲಸಿಗರನ್ನು ಬಂಧಿಸಲಾಗಿದೆ.
ನವಿ ಮುಂಬೈ ಪೊಲೀಸರು 10 ಮಂದಿ ಬಾಂಗ್ಲಾ ವಲಸಿಗರನ್ನು ಬಂಧಿಸಿದ್ದಾರೆ. ಈ ಪೈಕಿ 8 ಮಂದಿ ಮಹಿಳೆಯರು ಇದ್ದಾರೆ ಎಂದು ತಿಳಿದುಬಂದಿದೆ. ಬಂಧಿತರೆಲ್ಲರೂ ಭಾರತದಲ್ಲಿ ಅಕ್ರಮವಾಗಿ ದಾಖಲೆಗಳು ಇಲ್ಲದೇ ವಾಸಿಸುತ್ತಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಾರಾಂತ್ಯದಲ್ಲಿ ವಾಶಿ ಮತ್ತು ಖಾರ್ಘರ್ ಪ್ರದೇಶಗಳಲ್ಲಿ ಅಪರಾಧ ವಿಭಾಗದ ಮಾನವ ಕಳ್ಳಸಾಗಣೆ ತಡೆ ಘಟಕ ನಡೆಸಿದ ದಾಳಿಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಬಾಂಗ್ಲಾದೇಶದ ಪುರುಷರು ಸಾಮಾನ್ಯವಾಗಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಮತ್ತು ಮಹಿಳೆಯರು ಮನೆಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.
ಬಂಧಿತ ಬಾಂಗ್ಲಾದೇಶದ ಪುರುಷರು ಮತ್ತು ಮಹಿಳೆಯರು 2023 ರಿಂದ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರು ಭಾರತೀಯ ಪೌರತ್ವದ ಯಾವುದೇ ಪುರಾವೆ ಅಥವಾ ಪ್ರಯಾಣದ ದಾಖಲೆಗಳನ್ನು ನೀಡಲು ವಿಫಲರಾಗಿದ್ದಾರೆ.
"ಅವರಲ್ಲಿ ಕೆಲವರು ಭಾರತದಲ್ಲಿ ಅಕ್ರಮವಾಗಿ ವರ್ಷಗಳಿಂದ ವಾಸಿಸುತ್ತಿದ್ದಾರೆ" ಎಂದು ಅಧಿಕಾರಿ ತಿಳಿಸಿದ್ದು, ಖಾರ್ಘರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.