ನಂದ್ಯಾಲ್: ಆಂಧ್ರ ಪ್ರದೇಶದ ನಂದ್ಯಾಲ್ ಜಿಲ್ಲೆಯಲ್ಲಿ ಮಧ್ಯವಯಸ್ಕ ದಂಪತಿಗಳು ತಮ್ಮ 24 ವರ್ಷದ ಮಗ ತೃತೀಯ ಲಿಂಗಿಯನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸುಬ್ಬಾ ರಾಯುಡು(45) ಮತ್ತು ಸರಸ್ವತಿ(38) ಎಂಬ ದಂಪತಿ, ತಮ್ಮ ಮಗ ಸುನೀಲ್ ಕುಮಾರ್ ಕಳೆದ ಮೂರು ವರ್ಷಗಳಿಂದ ಸ್ಥಳೀಯ ತೃತೀಯಲಿಂಗಿ ಸಮುದಾಯದೊಂದಿಗೆ ಒಡನಾಟ ಹೊಂದಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಮತ್ತು ಈ ಸಂಬಂಧ ಮಗನೊಂದಿಗೆ ಜಗಳ ಮಾಡಿದ್ದಾರೆ ಎಂದು ನಂದ್ಯಾಲ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ಪಿ ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ.
ಕುಮಾರ್ ಮೂರು ವರ್ಷಗಳಿಂದ ತೃತೀಯಲಿಂಗಿಯೊಂದಿಗೆ ಸಂಬಂಧ ಹೊಂದಿದ್ದು, ಅವರನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದರು. ಈ ಸಂಬಂಧ ಕುಮಾರ್, ತನ್ನ ಪೋಷಕರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ಈ ವಿಚಾರವಾಗಿ ಕುಮಾರ್ ಈ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಹೆಚ್ಚಿನ ತನಿಖೆಯಲ್ಲಿ ಕುಮಾರ್ ಟ್ರಾನ್ಸ್‌ಜೆಂಡರ್‌ಗಳಿಗೆ ಸೇರಿದ 1.5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದು, ಪೋಷಕರಿಗೆ ಆ ಹಣ ಕೊಡುವಂತೆ ಒತ್ತಾಯಿಸಿದ್ದಾನೆ. ಈ ಸಂಬಂಧ ತೃತೀಯ ಲಿಂಗಿ ಸಮುದಾಯದ ಸದಸ್ಯರು ಪೋಷಕರನ್ನು ಸಾರ್ವಜನಿಕವಾಗಿ ನಿಂದಿಸಿದ್ದಾರೆ. ಇದರಿಂದ ನೊಂದ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.