ನವದೆಹಲಿ: ಹೊಸ ವರ್ಷಾಚರಣೆಗೆ ದೇಶಾದ್ಯಂತ ಭರ್ಜರಿ ತಯಾರಿ ನಡೆಯುತ್ತಿರುವಂತೆಯೇ, ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಭಾನುವಾರ ಹೊಸ ವರ್ಷಾಚರಣೆಯ ವಿರುದ್ಧ ಫತ್ವಾ ಹೊರಡಿಸಿದ್ದು, ಮುಸ್ಲಿಮರು ಅದನ್ನು ಆಚರಿಸದಂತೆ ನಿರುತ್ಸಾಹಗೊಳಿಸಿದ್ದಾರೆ. ಬದಲಿಗೆ ಅವರ ನಂಬಿಕೆಗೆ ಹೊಂದಿಕೆಯಾಗುವ ಧಾರ್ಮಿಕ ಆಚರಣೆಗಳತ್ತ ಗಮನ ಹರಿಸುವಂತೆ ಒತ್ತಾಯಿಸಿದ್ದಾರೆ.
ಚಶ್ಮೆ ದರ್ಫ್ತಾ ಬರೇಲಿ ಅವರು ಈ ಫತ್ವಾ ಹೊರಡಿಸಿದ್ದು, ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮುಸ್ಲಿಂ ಯುವಕರು ಮತ್ತು ಯುವತಿಯರು ಪಾಲ್ಗೊಳ್ಳಬಾರದು ಎಂದು ರಜ್ವಿ ಬರೇಲ್ವಿ ಹೇಳಿದ್ದಾರೆ.
ಹೊಸ ವರ್ಷ ಆಚರಿಸುವುದು ಹೆಮ್ಮೆಯ ವಿಷಯವಲ್ಲಾ. ಇದನ್ನು ಆಚರಿಸಬಾರದು ಅಥವಾ ಅಭಿನಂದಿಸಬಾರದು ಎಂದು ಹೊಸ ವರ್ಷ ಆಚರಿಸುವ ಯುವಕ- ಯುವತಿಯರಿಗೆ ಫತ್ವಾದಲ್ಲಿ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೊಸ ವರ್ಷ ಕ್ರಿಶ್ಚಿಯನ್ ಕ್ಯಾಲೆಂಡರ್ ಆರಂಭ ಅಥವಾ ಇಂಗ್ಲೀಷರ ವರ್ಷವಾಗಿದೆ ಎಂದು ಪ್ರತಿಪಾದಿಸಿರುವ ರಜ್ವಿ ಬರೇಲ್ವಿ, ಅಂತಹ ಧಾರ್ಮಿಕೇತರ ಆಚರಣೆಗಳನ್ನು ಮುಸ್ಲಿಮರಿಗೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ. ಮುಸ್ಲಿಂ ಯುವಕ-ಯುವತಿಯರು ಹೊಸ ವರ್ಷದ ಆಚರಣೆಗಳಲ್ಲಿ ಪಾಲ್ಗೊಳ್ಳುವ ಬದಲಿಗೆ ತಮ್ಮ ನಂಬಿಕೆಗೆ ಹೊಂದಿಕೆಯಾಗುವ ಧಾರ್ಮಿಕ ಆಚರಣೆಗಳತ್ತ ಗಮನ ಹರಿಸಬೇಕು ಎಂದು ನಿರ್ದೇಶಿಸಿದ್ದಾರೆ.