ನವದೆಹಲಿ: ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ, ರಾಹುಲ್ ಗಾಂಧಿ ಅವರು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಸಾವನ್ನು ತಮ್ಮ ರಾಜಕೀಯಕ್ಕೆ ದುರ್ಬಳಕೆ ಮಾಡಿಕೊಂಡಿದ್ದಾರೆ ಮತ್ತು ಅವರ ನಿಧನದ ಹಿನ್ನೆಲೆಯಲ್ಲಿದೇಶ ಶೋಕಾಚರಣೆಯಲ್ಲಿರುವಾಗ ಹೊಸ ವರ್ಷವನ್ನು ಆಚರಿಸಲು ವಿಯೆಟ್ನಾಂಗೆ ಹಾರಿದ್ದಾರೆ ಎಂದು ಸೋಮವಾರ ಆರೋಪಿಸಿದೆ.
ಇಂತಹ ವಿಷಯಾಂತರ ರಾಜಕೀಯವನ್ನು ಸಂಘಿಗಳು ಯಾವಾಗ ನಿಲ್ಲಿಸುತ್ತಾರೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
"ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ಶೋಕಾಚರಣೆಯಲ್ಲಿರುವಾಗ, ರಾಹುಲ್ ಗಾಂಧಿ ಅವರು ಹೊಸ ವರ್ಷವನ್ನು ಆಚರಿಸಲು ವಿಯೆಟ್ನಾಂಗೆ ಹಾರಿದ್ದಾರೆ" ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮನ್‍ಮೋಹನ್ ಸಿಂಗ್ ನಿಧನದಿಂದ ಪ್ರಧಾನಿ ಮೋದಿ ತಮ್ಮ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದರು. ಆದರೆ ಕಾಂಗ್ರೆಸ್ ನಾಯಕ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೊಸ ವರ್ಷ ಆಚರಣೆಗೆ ವಿಯೆಟ್ನಾಂ ಪ್ರವಾಸ ಮಾಡಿದ್ದಾರೆ ಎಂದು ಬಿಜೆಪಿ ನಾಯಕ ವಾಗ್ದಾಳಿ ನಡೆಸಿದೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಮಾಣಿಕ್ಕಂ ಟ್ಯಾಗೋರ್ ಅವರು, "ಸಂಘಿಗಳು ಈ ವಿಷಯಾಂತರ ರಾಜಕಾರಣವನ್ನು ಯಾವಾಗ ನಿಲ್ಲಿಸುತ್ತಾರೆ?" ಪ್ರಧಾನಿ ನರೇಂದ್ರ ಮೋದಿ ಅವರು ಯಮುನಾ ದಡದಲ್ಲಿ ಡಾ.ಸಿಂಗ್ ಅಂತ್ಯಸಂಸ್ಕಾರಕ್ಕೆ ಸ್ಥಳ ನಿರಾಕರಿಸಿದ ರೀತಿ ಮತ್ತು ಕೇಂದ್ರ ಸಚಿವರು ಅವರ ಕುಟುಂಬವನ್ನು ಮೂಲೆಗುಂಪು ಮಾಡಿದ ರೀತಿ ನಾಚಿಕೆಗೇಡಿನ ಸಂಗತಿಯಾಗಿದೆ. ಚಿತಾಭಸ್ಮದ ವಿಚಾರದಲ್ಲಿ ಬಿಜೆಪಿ ಸರ್ಕಾರ ರಾಜಕೀಯ ಮಾಡಿದೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"ರಾಹುಲ್ ಗಾಂಧಿ ಖಾಸಗಿಯಾಗಿ ವಿದೇಶಕ್ಕೆ ಪ್ರಯಾಣಿಸಿದರೆ, ನಿಮಗೆ ಏನು ತೊಂದರೆ?" ಆದರ ಬಗ್ಗೆ ಬಿಜೆಪಿಗೆ ಯಾಕಿಷ್ಟು ತಳಮಳ ಎಂದು ಮಾಳವಿಯಾ ಅವರು ಪ್ರಶ್ನಿಸಿದ್ದಾರೆ.