ದೇಶ

ಕೇಂದ್ರ ಸಚಿವ ಮುರುಗನ್ ವಿರುದ್ಧ ಡಿಎಂಕೆ ನಾಯಕನ ಹೇಳಿಕೆ: ಲೋಕಸಭೆಯಲ್ಲಿ ಗದ್ದಲ

Srinivas Rao BV

ನವದೆಹಲಿ: ಡಿಎಂಕೆ ನಾಯಕ ಟಿಆರ್ ಬಾಲು ಕೇಂದ್ರ ಸಚಿವ ಎಲ್ ಮುರುಗನ್ ವಿರುದ್ಧ ನೀಡಿದ್ದ ಹೇಳಿಕೆ ಲೋಕಸಭೆಯಲ್ಲಿ ಇಂದು ಗದ್ದಲಕ್ಕೆ ಕಾರಣವಾಯಿತು. ಆಡಳಿತ ಪಕ್ಷ ಬಿಜೆಪಿ ದಲಿತ ನಾಯಕನನ್ನು ಅವಮಾನಿಸಿದ್ದಕ್ಕೆ ಕ್ಷಮೆ ಕೋರುವಂತೆ ಡಿಎಂಕೆ ನಾಯಕನನ್ನು ಒತ್ತಾಯಿಸಿದೆ.
 
ಬೇಡಿಕೆಗೆ ಡಿಎಂಕೆ ನಾಯಕ ಬಾಲು ಒಪ್ಪದ ಪರಿಣಾಮ ಸ್ಪೀಕರ್ ಓಂ ಬಿರ್ಲಾ ಡಿಎಂಕೆ ನಾಯಕ ಪ್ರಯೋಗಿಸಿದ್ದ ಶಬ್ದವನ್ನು ದಾಖಲೆಗಳಿಂದ ತೆಗೆದುಹಾಕಿದರು. ಈ ಬೆನ್ನಲ್ಲೇ ಡಿಎಂಕೆ, ಕಾಂಗ್ರೆಸ್ ಮತ್ತು ಎಡ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿ ಹೊರನಡೆದರು. 

ಸದನದ ಪ್ರಶ್ನೋತ್ತರ ವೇಳೆಯಲ್ಲಿ ತಮಿಳುನಾಡಿಗೆ ಪ್ರವಾಹ ಪರಿಹಾರಕ್ಕೆ ಸಂಬಂಧಿಸಿದ ಪ್ರಶ್ನೆಯೊಂದರ ಕುರಿತು ಚರ್ಚೆ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ.ಅವರ ಪಕ್ಷದ ಇಬ್ಬರು ಸಹೋದ್ಯೋಗಿಗಳು ಈ ವಿಷಯದ ಬಗ್ಗೆ ಪ್ರಶ್ನೆಗಳನ್ನು ಕೇಳಿದ ನಂತರ, ಬಾಲು ಅವರು ಪೂರಕ ಪ್ರಶ್ನೆ ಕೇಳಿದರು. ಆ ಸಮಯದಲ್ಲಿ, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವ ಮುರುಗನ್, ಡಿಎಂಕೆ ನಾಯಕ "ಅಪ್ರಸ್ತುತ" ಪ್ರಶ್ನೆಯನ್ನು ಕೇಳುತ್ತಿದ್ದಾರೆ ಎಂದು ಹೇಳಿದರು.

ಈ ವೇಳೆ ಬಾಲು ಮುರುಗನ್ ವಿರುದ್ಧ ವಾಗ್ದಾಳಿ ನಡೆಸಿದರು. ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಅವರ ಉಪ ಅರ್ಜುನ್ ರಾಮ್ ಮೇಘವಾಲ್, ಹಲವಾರು ಸಚಿವರು ಮತ್ತು ಬಿಜೆಪಿ ಸಂಸದರು ಬಾಲು ಅವರ ಹೇಳಿಕೆಯನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾದರು.

ಮುರುಗನ್ ಒಬ್ಬ ದಲಿತ ಮತ್ತು ಅವರ ವಿರುದ್ಧ ಈ ಹೇಳಿಕೆಯು ಇಡೀ ದಲಿತ ಸಮುದಾಯಕ್ಕೆ "ಅವಮಾನ" ಎಂದು ಹೇಳಿರುವ ಬಿಜೆಪಿ ಹಾಗೂ ಮಿತ್ರಪಕ್ಷಗಳು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಆದರೆ, ಬಾಲು ಮಾತನ್ನು ಪುನರುಚ್ಚರಿಸಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ಮತ್ತೆ ಪ್ರತಿಭಟನೆ ನಡೆಸಿ ಕ್ಷಮೆ ಕೋರಲು ಒತ್ತಾಯಿಸಿದರು. ಶೀಘ್ರದಲ್ಲೇ, ಸ್ಪೀಕರ್ ಹೇಳಿಕೆಯನ್ನು ದಾಖಲೆಗಳಿಂದ ಹೊರಗಿಟ್ಟಿದ್ದಾರೆ.

SCROLL FOR NEXT