ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್  
ದೇಶ

ವಿಶ್ವಾಸಮತ ಸಾಬೀತುಪಡಿಸಿದ ಕೇಜ್ರಿವಾಲ್; ಎಎಪಿಯೇ 'ಬಿಜೆಪಿಗೆ ದೊಡ್ಡ ಸವಾಲು' ಎಂದ ದೆಹಲಿ ಸಿಎಂ

Lingaraj Badiger

ನವದೆಹಲಿ: ಬಹುಮತವಿದ್ದರೂ ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಭಾರತೀಯ ಜನತಾ ಪಕ್ಷ(ಬಿಜೆಪಿ) ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೆ ನಿರ್ಣಯ ಮಂಡಿಸಿದ್ದರು. ಇಂದು ಚರ್ಚೆಯ ಬಳಿಕ ನಿರ್ಣಯವನ್ನು ಮತಕ್ಕೆ ಹಾಕಲಾಗಿದ್ದು, ಧ್ವನಿ ಮತದ ಮೂಲಕ ವಿಶ್ವಾಸಮತ ಯಾಚನೆ ನಿರ್ಣಯ ಅಂಗೀಕರಿಸಲಾಗಿದೆ.

62 ಎಎಪಿ ಶಾಸಕರ ಪೈಕಿ 54 ಶಾಸಕರು ಅಧಿವೇಶನದಲ್ಲಿ ಹಾಜರಿದ್ದು, ಧ್ವನಿ ಮತದ ಮೂಲಕ ವಿಶ್ವಾಸಮತದ ನಿರ್ಣಯವನ್ನು ಸದನ ಅಂಗೀಕರಿಸಿದೆ. ಯಾವುದೇ ಆಪ್ ಶಾಸಕರು ಪಕ್ಷಾಂತರ ಮಾಡಿಲ್ಲ ಎಂದು ಕೇಜ್ರಿವಾಲ್ ಪ್ರತಿಪಾದಿಸಿದ್ದಾರೆ. ಇಬ್ಬರು ಶಾಸಕರು ಜೈಲಿನಲ್ಲಿದ್ದಾರೆ, ಕೆಲವರು ಅನಾರೋಗ್ಯದ ಕಾರಣದಿಂದ ಬಂದಿಲ್ಲ ಮತ್ತು ಕೆಲವರು ದೆಹಲಿಯಿಂದ ಹೊರಗಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

"ನಮಗೆ ಸದನದಲ್ಲಿ ಬಹುಮತವಿದೆ. ಆದರೆ ಬಿಜೆಪಿ ಎಎಪಿ ಶಾಸಕರನ್ನು ಖರೀದಿಸಲು ಪ್ರಯತ್ನಿಸುತ್ತಿರುವ ಕಾರಣ ಈ ವಿಶ್ವಾಸ ನಿರ್ಣಯದ ಅಗತ್ಯವಿತ್ತು" ಎಂದು ಕೇಜ್ರಿವಾಲ್ ವಿಶ್ವಾಸ ಮತದ ಮೇಲಿನ ಚರ್ಚೆಯ ಸಂದರ್ಭದಲ್ಲಿ ತಿಳಿಸಿದ್ದಾರೆ.

ನಮ್ಮ ಪಕ್ಷ ಬಿಜೆಪಿಗೆ ದೊಡ್ಡ ಸವಾಲಾಗಿದೆ. ಅದಕ್ಕಾಗಿಯೇ ಕೇಸರಿ ಪಕ್ಷ ಎಲ್ಲಾ ಕಡೆಯಿಂದ ನಮ್ಮ ಮೇಲೆ ದಾಳಿ ಮಾಡುತ್ತಿದೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕರು ಆರೋಪಿಸಿದ್ದಾರೆ.

"ಅವರು(ಬಿಜೆಪಿ) ಎಎಪಿ ಮೇಲೆ ದಾಳಿ ಮಾಡಿ ನಮ್ಮ ಸಚಿವರನ್ನು ಬಂಧಿಸಿದ ರೀತಿ ದೇಶದ ಜನರಿಗೆ ಅರ್ಥವಾಗಿದೆ. ಜನ ಮೂರ್ಖರು ಎಂದು ಅವರು ಭಾವಿಸಿದ್ದಾರೆ. ಆದರೆ ಜನ ಮೂರ್ಖರಲ್ಲ. ಜನ ಈ ಬಗ್ಗೆ ಉದ್ಯಾನಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ ಮತ್ತು ಪ್ರಧಾನಿ ಮೋದಿ, ಅರವಿಂದ್ ಕೇಜ್ರಿವಾಲ್ ಅವರನ್ನು ಹತ್ತಿಕ್ಕಲು ಬಯಸುತ್ತಿದ್ದಾರಾ?... ಎಂದು ಪ್ರಶ್ನಿಸುತ್ತಿದ್ದಾರೆ. ನಮ್ಮ ನಂಬರ್ ಟು, ನಂಬರ್ ಥ್ರೀ, ನಂಬರ್ ಫೋರ್ ಜೈಲಿನಲ್ಲಿದ್ದಾರೆ. ಶೀಘ್ರದಲ್ಲೇ ನಂಬರ್ ಒನ್ ಅವರನ್ನು ಬಂಧಿಸಲಾಗುವುದು ಎಂದು ಹೇಳಲಾಗುತ್ತಿದೆ. ಎಎಪಿ ಇಡೀ ಬಿಜೆಪಿಗೆ ದೊಡ್ಡ ಸವಾಲಾಗಿದೆ. ಹೀಗಾಗಿ ಈ ರೀತಿ ಮಾಡುತ್ತಿದ್ದಾರೆ"
ಅರವಿಂದ್ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ

ಕೇಜ್ರಿವಾಲ್ ಅವರನ್ನು ಬಂಧಿಸುವ ಮೂಲಕ ಎಎಪಿಯನ್ನು ಮುಗಿಸಬಹುದು ಎಂದು ಬಿಜೆಪಿ ಭಾವಿಸಿದೆ. ಆದರೆ ಈ ಹಿಂದೆಯೇ ಅಂತಹ ಹಲವು ದಾಳಿಗಳನ್ನು ನಾನು ಎದುರಿಸಿದ್ದೇನೆ. ಕಪಾಳಮೋಕ್ಷ ಮಾಡಿದ್ದಾರೆ. ನನ್ನ ಮೇಲೆ ಮಸಿ ಎರಚಿದ್ದಾರೆ. ಈಗ ಬಂಧಿಸಲು ಬಯಸುತ್ತಿದ್ದಾರೆ ಎಂದು ಕೇಜ್ರಿವಾಲ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

SCROLL FOR NEXT