ದೇಶ

ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ಜೊತೆ ಮೈತ್ರಿ: 2 ದಿನದಲ್ಲಿ ಗುಡ್ ನ್ಯೂಸ್; ಕಮಲ್ ಹಾಸನ್

Shilpa D

ಚೆನ್ನೈ: ಲೋಕಸಭೆ ಚುನಾವಣೆಗೆ ಇನ್ನೆರಡು ತಿಂಗಳಷ್ಟೇ ಬಾಕಿ ಉಳಿದಿದ್ದು, ಇದಕ್ಕಾಗಿ ಎಲ್ಲ ಪಕ್ಷಗಳು ಚುನಾವಣಾ ಕಾರ್ಯ ಆರಂಭಿಸಿವೆ. ಮೈತ್ರಿ, ಕ್ಷೇತ್ರ ಹಂಚಿಕೆ ಮಾತುಕತೆ ಆರಂಭವಾಗಿದೆ. ತಮಿಳುನಾಡಿನಲ್ಲಿ ರಾಜಕೀಯ ಪಕ್ಷಗಳು ಮೈತ್ರಿ ಮಾತುಕತೆ ಮುಗಿಸಿ ಡೀಲ್ ಕುದುರಿಸುವ ಹಂತದಲ್ಲಿವೆ.

ತಮಿಳುನಾಡಿನಲ್ಲೂ ಮೈತ್ರಿ ಪ್ರಯತ್ನಗಳು ಆರಂಭವಾಗಿದೆ. ರಾಜ್ಯದ ಆಡಳಿತಾರೂಢ ಡಿಎಂಕೆ ಮತ್ತು ನಟ-ರಾಜಕಾರಣಿ ಕಮಲ್ ಹಾಸನ್ ಅವರ ಪಕ್ಷ ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ವಿಲೀನಗೊಳ್ಳುವ ಸಾಧ್ಯತೆಯಿದೆ.

ಎರಡೂ ಪಕ್ಷಗಳಲ್ಲಿ ಸೀಟು ಹಂಚಿಕೆ ಕುರಿತು ಅಂತಿಮ ಚರ್ಚೆ ನಡೆಯುತ್ತಿದೆ ಎಂದು ವರದಿಯಾಗಿದೆ. ಇಬ್ಬರೂ ಒಟ್ಟಿಗೆ ಚುನಾವಣೆಗೆ ಸ್ಪರ್ಧಿಸುವುದಾಗಿ ಶೀಘ್ರದಲ್ಲೇ ಘೋಷಿಸುವ ಸಾಧ್ಯತೆಯಿದೆ. ಡಿಎಂಕೆ ನೇತೃತ್ವದ ಮೈತ್ರಿಕೂಟ ಸೇರುವ ಬಗ್ಗೆ ಕಮಲ್ ಹಾಸನ್ ಈಗಾಗಲೇ ಸುಳಿವು ನೀಡಿದ್ದರು. ಇದರಲ್ಲಿ ಕಾಂಗ್ರೆಸ್ ಕೂಡ ಭಾಗಿಯಾಗಿದೆ. ಇದೀಗ ಎಂಕೆ ಸ್ಟಾಲಿನ್ ಅವರೊಂದಿಗಿನ ಭೇಟಿಯ ನಂತರ ಲೋಕಸಭೆ ಚುನಾವಣೆಯನ್ನು ಒಟ್ಟಾಗಿ ಎದುರಿಸುವುದಾಗಿ ಘೋಷಿಸುವ ಸಾಧ್ಯತೆಯಿದೆ.

ವಿಧಾನಸಭೆಯ ಬಜೆಟ್ ಅಧಿವೇಶನದ ನಂತರ ಕಮಲ್ ಹಾಸನ್ ಮತ್ತು ಡಿಎಂಕೆ ನಾಯಕರ ನಡುವೆ ಸಭೆ ನಡೆಸಲು ಯೋಜಿಸಲಾಗಿದೆ. ತಮಿಳುನಾಡು ವಿಧಾನಸಭೆಯ ಬಜೆಟ್ ಅಧಿವೇಶನ ಸೋಮವಾರದಿಂದ ಆರಂಭವಾಗಿದೆ. ಎಂಎನ್ ಎಂಗೆ ಒಂದು ಸ್ಥಾನ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಮಲ್ ಹಾಸನ್ ಅವರೇ ಈ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

ಅಮೆರಿಕಾದಿಂದ ಚೆನ್ನೈಗೆ ವಾಪಸಾದ ಬಳಿಕ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಕಮಲ್ ಹಾಸನ್, "ಥಗ್ ಲೈಫ್ ಚಿತ್ರದ ಪ್ರಚಾರಕ್ಕಾಗಿ ಅಮೆರಿಕಕ್ಕೆ ಹೋಗಿದ್ದೆ, ಆ ಕೆಲಸಗಳನ್ನು ಮುಗಿಸಿ ಈಗ ವಾಪಸ್ಸಾಗುತ್ತಿದ್ದೇನೆ, ಇನ್ನೆರಡು ದಿನದಲ್ಲಿ ಶುಭ ಸುದ್ದಿಯೊಂದಿಗೆ ನಿಮ್ಮನ್ನು ಭೇಟಿ ಮಾಡುತ್ತೇನೆ. ನಾನು ಯಾವುದೇ ಸುದ್ದಿ ತಂದಿಲ್ಲ ಉಳಿದವರೆಲ್ಲರ ಜೊತೆ ಸಮಾಲೋಚಿಸಿ ಎರಡು ದಿನದಲ್ಲಿ ಭೇಟಿಯಾಗಿ ಈ ಬಗ್ಗೆ ವಿವರಿಸುತ್ತೇನೆ" ಎಂದಿದ್ದಾರೆ.

SCROLL FOR NEXT