ಪ್ರಧಾನಿ ಮೋದಿ
ಪ್ರಧಾನಿ ಮೋದಿ 
ದೇಶ

ರಾಜ್ಯದ 15 ರೈಲ್ವೆ ನಿಲ್ದಾಣಗಳು ಸೇರಿ ದೇಶದ 554 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

Manjula VN

ನವದೆಹಲಿ: ರಾಜ್ಯದ 15 ರೈಲ್ವೇ ನಿಲ್ದಾಣ ಒಳಗೊಂಡಂತೆ ಅಮೃತ ಭಾರತ ಯೋಜನೆಯಡಿ ದೇಶದ 554 ರೈಲು ನಿಲ್ದಾಣಗಳ ಪುನಾರಾಭಿವೃದ್ಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ವರ್ಚುವಲ್​ ಮೂಲಕ ಪ್ರಧಾನಿ ಮೋದಿಯವರು ರೈಲು ನಿಲ್ದಾಣಗಳ ಪುನಾರಾಭಿವೃದ್ಧಿಗೆ ಕಾರ್ಯಕ್ಕೆ ಚಾಲನೆ ನೀಡಿದರು. ದೇಶದ 554 ರೈಲ್ವೆ ನಿಲ್ದಾಣಗಳ ನವೀಕರಣ, ಅಭಿವೃದ್ಧಿ ಕಾಮಗಾರಿ ಹಾಗೂ 1500 ಮೇಲ್ಸೇತುವೆ ಕಾಮಗಾರಿಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಇಂದು ರೈಲ್ವೇಗೆ ಸಂಬಂಧಿಸಿದ 2000ಕ್ಕೂ ಹೆಚ್ಚು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಗಿದೆ. ಈ ಸರ್ಕಾರದ ಮೂರನೇ ಅವಧಿಯು ಜೂನ್‌ನಿಂದ ಪ್ರಾರಂಭವಾಗಲಿದೆ ಆದರೆ ಕಾಮಗಾರಿ ಪ್ರಾರಂಭವಾದ ಪ್ರಮಾಣ ಮತ್ತು ವೇಗವು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಇಂದಿನ ಕಾರ್ಯಕ್ರಮ ನವಭಾರತದ ಹೊಸ ಸಂಸ್ಕೃತಿಯ ಸಂಕೇತವಾಗಿದೆ. ಭಾರತ ಇಂದು ಏನೇ ಮಾಡಿದರೂ ಅದು ಅಭೂತಪೂರ್ವ ವೇಗದಲ್ಲಿ ಮಾಡುತ್ತದೆ. ಸಣ್ಣಪುಟ್ಟ ಕನಸ್ಸುಗಳನ್ನು ನಿಲ್ಲಿಸಿ, ದೊಡ್ಡ ಕನಸ್ಸುಗಳನ್ನು ಕಾಣುತ್ತಿದ್ದೇವೆ. ಆ ಕನಸನ್ನು ಈಡೇರಿಸಲು ಹಗಲಿರುಳು ಶ್ರಮಿಸುತ್ತಿದ್ದೇವೆ. ಇದು ಅಭಿವೃದ್ಧಿ ಹೊಂದಿದ ಭಾರತದ ನಿರ್ಣಯವಾಗಿದೆ ಎಂದು ಹೇಳಿದರು.

ನಿನ್ನೆ ರಾಜ್‌ಕೋಟ್‌ನಲ್ಲಿ 5 ಏಮ್ಸ್ ಮತ್ತು ಇತರ ಹಲವಾರು ವೈದ್ಯಕೀಯ ಸಂಸ್ಥೆಗಳನ್ನು ಉದ್ಘಾಟಿಸಿದೆ. ಇಂದು 27 ರಾಜ್ಯಗಳ 300 ಜಿಲ್ಲೆಗಳಲ್ಲಿ 554 ರೈಲ್ವೆ ನಿಲ್ದಾಣಗಳ ಮರು ಅಭಿವೃದ್ಧಿಗೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇಂದು ಉತ್ತರ ಪ್ರದೇಶದ ಗೋಮತಿ ನಗರ ರೈಲು ನಿಲ್ದಾಣದ ಉದ್ಘಾಟನೆ ಹಾಗೂಭಾರತೀಯ ರೈಲ್ವೆಯ 1500 ಮೇಲ್ಸೇತುವೆ ನಿರ್ಮಿಸಲು ಅಡಿಪಾಯ ಹಾಕಲಾಗಿದೆ ಎಂದು ಎಂದು ತಿಳಿಸಿದರು.

ಅಮೃತ ಭಾರತ ನಿಲ್ದಾಣ ಯೋಜನೆಯಡಿ 372,13 ಕೋಟಿ ರೂ. ವೆಚ್ಚದಲ್ಲಿ ರಾಜ್ಯ 15 ರೈಲು ನಿಲ್ದಾಣಗಳಿಗೆ ಸ್ಮಾರ್ಟ್​ ಟಚ್​ ನೀಡಲಾಗುತ್ತಿದೆ.

ಯೋಜನೆಯಡಿ ನೈಋತ್ಯ ರೈಲ್ವೆ ವ್ಯಾಪ್ತಿಯ ಕರ್ನಾಟಕದ ಕೆಂಗೇರಿ, ಕೃಷ್ಣರಾಜಪುರ, ಬಂಗಾರಪೇಟೆ, ಚನ್ನಪಟ್ಟಣ, ಧರ್ಮಪುರಿ, ದೊಡ್ಡಬಳ್ಳಾಪುರ, ಹಿಂದೂಪುರ, ಹೊಸೂರು, ಕುಪ್ಪಂ, ಮಲ್ಲೇಶ್ವರ, ಮಾಲೂರು, ಮಂಡ್ಯ, ರಾಮನಗರ, ತುಮಕೂರು, ವೈಟ್​ ಫೀಲ್ಡ್​​ ರೈಲು ನಿಲ್ದಾಣಗಳು ಒಟ್ಟು 327.13 ರೂ. ಕೋಟಿ ವೆಚ್ಚದಲ್ಲಿ ಉನ್ನತೀಕರಣಗೊಳ್ಳಲಿವೆ.

ಅಮೃತ ಭಾರತ ನಿಲ್ದಾಣ ಯೋಜನೆಯಡಿ ದೇಶಾದ್ಯಂತ ರೈಲು ನಿಲ್ದಾಣಗಳನ್ನು ಹೆಚ್ಚಿಸುವುದು ಮತ್ತು ಆಧುನೀಕರಿಸುವ ಗುರಿ ಹೊಂದಿದೆ. ಈ ಯೋಜನೆ ಅಡಿಯಲ್ಲಿ ಒಟ್ಟು 1275 ನಿಲ್ದಾಣಗಳನ್ನು ನವೀಕರಿಸಲು ಮತ್ತು ಆಧುನೀಕರಿಸಲು ಉದ್ದೇಶಿಸಿದೆ.

ಈ ಯೋಜನೆ ವಿವಿಧ ನಿಲ್ದಾಣದ ಸೌಲಭ್ಯಗಳನ್ನು ಹೆಚ್ಚಿಸಲು ಮಾಸ್ಟರ್ ಪ್ಲಾನ್‌ಗಳನ್ನು ರಚಿಸುವುದು ಮತ್ತು ಹಂತಗಳಲ್ಲಿ ಅವುಗಳನ್ನು ಕಾರ್ಯಗತಗೊಳಿಸುವುದನ್ನು ಒಳಗೊಂಡಿದೆ. ನಿಲ್ದಾಣದ ಪ್ರವೇಶವನ್ನು ಉತ್ತಮಗೊಳಿಸುವುದು, ವಿಶ್ರಾಂತಿ ಕೊಠಡಿ, ಶೌಚಾಲಯ ಸೌಲಭ್ಯಗಳು, ಲಿಫ್ಟ್ ಮತ್ತು ಎಸ್ಕಲೇಟರ್ ಸ್ಥಾಪನೆ, ಸ್ವಚ್ಛತೆ, ಉಚಿತ ವೈ-ಫೈ ನೀಡುವಿಕೆ, ‘ಒಂದು ನಿಲ್ದಾಣದ ಒಂದು ಉತ್ಪನ್ನ’ ದಂತಹ ಉಪಕ್ರಮಗಳ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜಿಸುವುದು. ಕಾರ್ಯನಿರ್ವಾಹಕ ವಿಶ್ರಾಂತಿ ಕೊಠಡಿಗಳು ಸೇರಿದಂತೆ ಪ್ರತಿ ನಿಲ್ದಾಣಕ್ಕೆ ಅದರ ಅವಶ್ಯಕತೆಗಳನ್ನು ಪೂರೈಸುವುದು.

ಇದಲ್ಲದೆ, ಈ ಯೋಜನೆಯ ಅಡಿಯಲ್ಲಿ ನಿಲ್ದಾಣದ ರಚನೆಗಳನ್ನು ನವೀಕರಿಸುವುದು, ಎರಡೂ ಕಡೆಗಳಲ್ಲಿ ಸುತ್ತಮುತ್ತಲಿನ ನಗರ ಪ್ರದೇಶಗಳೊಂದಿಗೆ ನಿಲ್ದಾಣಗಳನ್ನು ಸಂಯೋಜಿಸುವುದು, ಮಲ್ಟಿಮೋಡಲ್ ಸಂಪರ್ಕವನ್ನು ಉತ್ತೇಜಿಸುವುದು, ದಿವ್ಯಾಂಗ ಸ್ನೇಹಿ ಸೌಲಭ್ಯಗಳನ್ನು ಒದಗಿಸುವುದು, ಸುಸ್ಥಿರ ಮತ್ತು ಪರಿಸರ ಸ್ನೇಹಿ ಪರಿಹಾರಗಳನ್ನು ಅನುಷ್ಠಾನಗೊಳಿಸುವುದು, ಬಲ್ಲಾಸ್ಟ್ ರಹಿತ ಟ್ರ್ಯಾಕ್ ಅನ್ನು ಪರಿಚಯಿಸುವುದು, ಅಗತ್ಯವಿರುವ ಕಡೆ ರೂಫ್ ಪ್ಲಾಜಾ ನಿರ್ಮಿಸುವುದು ಮತ್ತು ಸುಧಾರಣೆಗಳ ಕಾರ್ಯಸಾಧ್ಯತೆ ಮತ್ತು ಹಂತವನ್ನು ಪರಿಗಣಿಸಿ ಒತ್ತು ನೀಡಲಾಗುತ್ತದೆ. ದೀರ್ಘಾವಧಿಯಲ್ಲಿ ಈ ನಿಲ್ದಾಣಗಳನ್ನು ರೋಮಾಂಚಕ ನಗರ ಕೇಂದ್ರವನ್ನಾಗಿ ಪರಿವರ್ತಿಸುವುದು ಅಂತಿಮ ಗುರಿಯಾಗಿದೆ.

SCROLL FOR NEXT