ದೇಶ

ಹಿನ್ನೋಟ 2023: ತಗ್ಗದ ಮಾತಿನ ಅಬ್ಬರ, ವಿವಾದಗಳ ಆಗರ

Shilpa D

2023ನೇ  ವರ್ಷದಲ್ಲಿ ಹಲವು ಘಟನೆಗಳು ನಡೆದವು, ದೇಶದಲ್ಲಿ ಹಲವು ರಾಜಕೀಯ ನಾಯಕರು ವಿವಾದಾತ್ಮಕ  ಹೇಳಿಕೆ ನೀಡಿ  ಸುದ್ದಿಯಾದರು. ಯಾರು ಏನು ಹೇಳಿ ವಿವಾದ ಸೃಷ್ಟಿಸಿದ್ದರು ಎಂಬುದು ಒಂದು ಸಣ್ಣ ಝಲಕ್ ಇಲ್ಲಿದೆ...

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರ ಪುತ್ರ, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮದ ಕುರಿತು ನೀಡಿದ ಹೇಳಿಕೆ ಭಾರಿ ವಿವಾದವಾಗಿತ್ತು. ಸನಾತನ ಧರ್ಮವು ಡೆಂಗ್ಯೂ ಮತ್ತು ಮಲೇರಿಯಾ ರೋಗವಿದ್ದಂತೆ. ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು ಎಂದು ಉದಯನಿಧಿ ಸ್ಟಾಲಿನ್‌ ಕಾರ್ಯ ವೊಂದರಲ್ಲಿ ನೀಡಿದ ಹೇಳಿಕೆ ಭಾರೀ ಟೀಕೆಗೆ ಗುರಿಯಾಯಿತು.

ಅದಾದ ನಂತರ ‘ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನನ್ನ ಅಮ್ಮ, ಅಪ್ಪನಿಗೆ ಹುಟ್ಟಿದ್ದೇನೆ’ ಎಂಬುದಾಗಿ ಪ್ರಶ್ನಿಸಿದವರಿಗೆ ತಿಳಿಸಿದ್ದೇನೆ ಎಂದು ಬಹುಭಾಷಾ ನಟ ಪ್ರಕಾಶ್ ರೈ  ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಟಿಎಂಸಿಯ ಮಾಜಿ ಸಂಸದೆ ಮಹುವಾ ಮೊಯಿತ್ರಾ. ಉದ್ಯಮಿ ದರ್ಶನ್‌ ಹೀರಾನಂದಿನಿ ಅವರಿಂದ 2 ಕೋಟಿ ರೂ. ಗಳ ವರೆಗೆ ಲಂಚ ಪಡೆದು, ಸಂಸತ್‌ನಲ್ಲಿ ಮೋದಿ ಅವರನ್ನು ಪ್ರಶ್ನಿಸಲು ಪಾಸ್‌ ವರ್ಡ್‌ ಶೇರ್‌ ಮಾಡಿದ್ದಾರೆ. ಈ ಮೂಲಕ ಸಂಸದೀಯ ನಿಯಮಗಳನ್ನು ಉಲ್ಲಂ ಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಮಹಿಳಾ ಕುಸ್ತಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಿಂದ ಬಿಜೆಪಿ ಸಂಸದ, ಭಾರತೀಯ ಕುಸ್ತಿ ಫೆಡರೇಶನ್‌ನ ಅಧ್ಯಕ್ಷರಾಗಿದ್ದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಸುದ್ದಿಯಲ್ಲಿದ್ದರು. ಭೂಷಣ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಹಿಳಾ ಕುಸ್ತಿಪಟುಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಭಾರತದ ಅಭಿವೃದ್ಧಿಗಾಗಿ ಯುವಕರು ವಾರಕ್ಕೆ 70 ಗಂಟೆಗಳು ಕೆಲಸ ಮಾಡಬೇಕು ಎಂದು ಇನ್ಫೋಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌.ನಾರಾಯಣ ಮೂರ್ತಿ ಅವರು ನೀಡಿದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದು ಪರ ಮತ್ತು ವಿರೋಧದ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು.  ಇನ್ಫೋಸಿಸ್‌ನಲ್ಲಿ ಸಕ್ರಿಯವಾಗಿದ್ದ ಸಂದರ್ಭದಲ್ಲಿ ತಾವು ವಾರಕ್ಕೆ 70 ರಿಂದ 90 ಗಂಟೆಗಳವರೆಗೆ ಕೆಲಸ ಮಾಡುತ್ತಿದ್ದೆ ಎಂದು ನಾರಾಯಣಮೂರ್ತಿ ವಿವರಿಸಿದ್ದರು.

2023ರಲ್ಲಿ ರಶ್ಮಿಕಾ ವೈರಲ್‌ ಆಗಿದ್ದೇ ಬೇರೆ ಕಾರಣಕ್ಕೆ. ಅದೇ ಡೀಪ್‌ಫೇಕ್‌! ರಶ್ಮಿಕಾ ಅವರ ಮುಖವನ್ನು ಯಾವುದೋ ವೀಡಿಯೋಗೆ ಹೊಂದಿಸಿ ಜಾಲತಾಣಗಳಲ್ಲಿ ವೈರಲ್‌ ಮಾಡಲಾಗಿತ್ತು. ಇದರಿಂದ ಮನನೊಂದಿದ್ದ ನಟಿ ಡೀಪ್‌ಫೇಕ್‌ ಬಗ್ಗೆ ಜಾಲತಾಣದಲ್ಲೇ ಗುಡುಗಿದ್ದರಲ್ಲದೇ, ರಶ್ಮಿಕಾಗೆ ಭಾರತೀಯ ಸಿನಿಮಾರಂಗದ ಬಹುತೇಕ ತಾರೆಗಳಿಂದ ಬೆಂಬಲ ವ್ಯಕ್ತವಾಗಿತ್ತು.

ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪ ಇದ್ದಂತೆ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಹಲವು ವಿವಾದ ಸೃಷ್ಟಿಸಿತ್ತು. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ತಪ್ಪಾಗಿ ಅರ್ಥೈಸಿ ಯಾರಿಗಾದರೂ ನೋವಾಗಿದ್ದರೆ, ಅದಕ್ಕಾಗಿ ವಿಶೇಷ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು.

ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಅವರು ಜೋಡಿಯಾಗಿ ನಟಿಸಿದ ‘ಪಠಾಣ್​’ ಸಿನಿಮಾ 2023ರ ಜನವರಿ 25ರಂದು ಬಿಡುಗಡೆ ಆಯಿತು. ಆ ಸಿನಿಮಾದ ‘ಬೇಷರಂ ರಂಗ್​..’ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಿಕಿನಿ ಧರಿಸಿದ್ದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು.

ಮೇ ತಿಂಗಳಲ್ಲಿ ಬಿಡುಗಡೆಯಾದ ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಕೆಲವು ವಿವಾದಿತ ಅಂಶಗಳು ಇವೆ ಎಂದು ಆಕ್ಷೇಪ ಎದುರಾಗಿತ್ತು. ಒಂದು ಸಮುದಾಯದ ಜನರನ್ನು ಇದರಲ್ಲಿ ಆಕ್ಷೇಪಾರ್ಹವಾಗಿ ತೋರಿಸಲಾಗಿದೆ ಎಂದು ಹೇಳಲಾಗಿತ್ತು.

ಹಿಂದಿಗೂ ಡಬ್​ ಆಗಿ ಬಿಡುಗಡೆಯಾದ ಇಂಗ್ಲಿಷ್​ನ ಆಪನ್​ಹೈಮರ್​ ಸಿನಿಮಾದಲ್ಲಿ ಭಗವದ್ಗೀತೆಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಎದುರಾಗಿತ್ತು. ಈ ಸಿನಿಮಾದಲ್ಲಿನ ಬೆಡ್​ರೂಮ್​ ದೃಶ್ಯದಲ್ಲಿ ಕಥಾನಾಯಕ ಭಗವದ್ಗೀತೆಯ ಸಾಲುಗಳನ್ನು ಓದುತ್ತಾನೆ. ಅದರಿಂದ ಹಿಂದೂಗಳ ಭಾವನೆಗೆ ಧಕ್ಕೆ ಆಗಿದೆ ಎಂದು ಕೆಲವರು ತಕರಾರು ತೆಗೆದಿದ್ದರು.

SCROLL FOR NEXT