ದೇಶ

ಅದಾನಿ-ಹಿಂಡೆನ್‌ಬರ್ಗ್: ಎಸ್‌ಐಟಿ ತನಿಖೆ ನಿರಾಕರಿಸಿದ 'ಸುಪ್ರೀಂ', 'ಪ್ರಕರಣವನ್ನು ಸೆಬಿಯಿಂದ ವರ್ಗಾಯಿಸಲು ಆಗಲ್ಲ'

Ramyashree GN

ನವದೆಹಲಿ: ಅದಾನಿ ಸಮೂಹದ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಎರಡು ಪ್ರಕರಣಗಳ ತನಿಖೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಸೆಬಿಗೆ ಸೂಚಿಸಿದೆ.

ಸೆಬಿಯ ತನಿಖಾ ಅಧಿಕಾರವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು, ಅದಾನಿ ಸಮೂಹದ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ 24 ಪ್ರಕರಣಗಳಲ್ಲಿ 22 ರಲ್ಲಿ ಸೆಬಿ ಈಗಾಗಲೇ ತನ್ನ ತನಿಖೆಯನ್ನು ಪೂರ್ಣಗೊಳಿಸಿದೆ ಎಂಬುದನ್ನು ಗಮನಿಸಿತು.

ಪ್ರಕರಣದ ಸತ್ಯಾಸತ್ಯತೆಗಳು ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಅಥವಾ ಇತರ ತನಿಖಾ ಸಂಸ್ಥೆಗೆ ವರ್ಗಾಯಿಸುವುದನ್ನು ಸಮರ್ಥಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅದಾನಿ ಸಮೂಹವು ಷೇರು ಬೆಲೆಯ ಮೇಲೆ ಕೃತಕವಾಗಿ ಪರಿಣಾಮ ಬೀರುವ ಕೆಲಸದಲ್ಲಿ ಹಾಗೂ ಲೆಕ್ಕಪತ್ರಗಳ ವಂಚನೆಯಲ್ಲಿ ತೊಡಗಿದೆ ಎಂದು ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆಯಾದ ಹಿಂಡೆನ್‌ಬರ್ಗ್ ರಿಸರ್ಚ್ ವರದಿ ಆರೋಪಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದು ತನ್ನ ತೀರ್ಪು ನೀಡಿದೆ. 

ತೀರ್ಪನ್ನು ಘೋಷಿಸುವಾಗ, ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ದ ಅಧಿಕಾರ ವ್ಯಾಪ್ತಿಗೆ ಪ್ರವೇಶಿಸಲು ಉನ್ನತ ನ್ಯಾಯಾಲಯಕ್ಕೆ ಇರುವ ಅಧಿಕಾರವನ್ನು ಸೀಮಿತಗೊಳಿಸಲಾಗಿದೆ. ಸೆಬಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಿಯಂತ್ರಿಸಲು ನ್ಯಾಯಾಲಯ ಯಾವುದೇ ಅಧಿಕಾರವನ್ನು ಹೊಂದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ವಕೀಲರಾದ ವಿಶಾಲ್ ತಿವಾರಿ, ಎಂಎಲ್ ಶರ್ಮಾ, ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಮತ್ತು ಅನಾಮಿಕಾ ಜೈಸ್ವಾಲ್ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಗಳ ತೀರ್ಪನ್ನು ಕಳೆದ ವರ್ಷ ನವೆಂಬರ್ 24 ರಂದು ಸುಪ್ರೀಂ ಕೋರ್ಟ್ ಕಾಯ್ದಿರಿಸಿತ್ತು.

ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಸಮೂಹದ ವಿರುದ್ಧ ಮಾಡಿದ ಆರೋಪಗಳ ಬಳಿಕ ಅದಾನಿ ಗ್ರೂಪ್ ಸ್ಟಾಕ್‌ಗಳು ಷೇರುಗಳ ಮೌಲ್ಯವು ವ್ಯಾಪಕವಾಗಿ ಕುಸಿಯಿತು. ಅದಾನಿ ಗ್ರೂಪ್ ಈ ಎಲ್ಲಾ ಆರೋಪಗಳನ್ನು ಸುಳ್ಳು ಎಂದು ತಳ್ಳಿಹಾಕಿತು.

SCROLL FOR NEXT