ದೇಶ

ಉಕ್ರೇನ್‌ಗೆ ಭಾರತ ಯಾವುದೇ ಶಸ್ತ್ರಾಸ್ತ್ರ ಕಳುಹಿಸಿಲ್ಲ: ಎಂಇಎ

Nagaraja AB

ನವದೆಹಲಿ: ಉಕ್ರೇನ್‌ನಲ್ಲಿ ಕೆಲವು ಭಾರತೀಯ ಮೂಲದ ಫಿರಂಗಿ ಶೆಲ್‌ಗಳು ಪತ್ತೆ ಕುರಿತ ವರದಿಗಳನ್ನು ಭಾರತ ಗುರುವಾರ ತಳ್ಳಿಹಾಕಿದ್ದು,  ಆ ದೇಶಕ್ಕೆ ಯಾವುದೇ ಮದ್ದುಗುಂಡುಗಳನ್ನು ಕಳುಹಿಸಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಉಕ್ರೇನ್‌ಗೆ ಯಾವುದೇ ಮದ್ದುಗುಂಡುಗಳನ್ನು ಕಳುಹಿಸಿಲ್ಲ ಅಥವಾ ರಫ್ತು ಮಾಡಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯದಲ್ಲಿ ಕೆಲವು ಮಾಧ್ಯಮ ವರದಿಗಳನ್ನು ನೋಡಿದ್ದೇವೆ. ನಾವು ಯಾವುದೇ ಫಿರಂಗಿ ಮದ್ದುಗುಂಡುಗಳನ್ನು ಉಕ್ರೇನ್‌ಗೆ ಕಳುಹಿಸಿಲ್ಲ ಎಂದು ನಾವು ಸ್ಪಷ್ಟವಾಗಿ ಹೇಳಬಹುದು ಎಂದರು. ಉಕ್ರೇನ್‌ನಲ್ಲಿ ಭಾರತ ನಿರ್ಮಿತ ಫಿರಂಗಿ ಶೆಲ್‌ಗಳ ಪತ್ತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಜೈಸ್ವಾಲ್ ಈ ಹೇಳಿಕೆ ನೀಡಿದರು.ಉಕ್ರೇನ್‌ನಲ್ಲಿನ ಸಂಘರ್ಷವನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕು ಎಂದು ಭಾರತ ಪ್ರತಿಪಾದಿಸುತ್ತಿದೆ ಎಂದರು. 

ಮಂಗಳವಾರ ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷ, ಕೈವ್‌ನ ಶಾಂತಿ ಸೂತ್ರ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಮುನ್ನಡೆಸುವ ಮಾರ್ಗಗಳ ಕುರಿತು ಮಾತನಾಡಿದರು. ರಷ್ಯಾಕ್ಕೆ ಐದು ದಿನಗಳ ಭೇಟಿ ನೀಡಿ, ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಮತ್ತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ನಂತರ ಕೆಲ ದಿನಗಳ ನಂತರ ಉಕ್ರೇನ್ ವಿದೇಶಾಂಗ ಸಚಿವರೊಂದಿಗೆ ಮಾತನಾಡಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಜೈಶಂಕರ್, ಉಕ್ರೇನ್‌ ವಿದೇಶಾಂಗ ಸಚಿವರೊಂದಿಗೆ ಫಲಪ್ರದ ಮಾತುಕತೆ ನಡೆದಿದೆ. ಮುಂದಿನ ವರ್ಷಗಳಲ್ಲಿ ನಮ್ಮ ದ್ವಿಪಕ್ಷೀಯ ಸಹಕಾರವನ್ನು ಮುಂದುವರಿಸುವ ಕುರಿತು ಚರ್ಚಿಸಲಾಗಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ತಿಳಿಸಿದ್ದಾರೆ. 

ಕುಲೆಬಾ ಅವರು "ಶಾಂತಿ ಸೂತ್ರ" ಮತ್ತು 'ಜಾಗತಿಕ ನಾಯಕರ ಶಾಂತಿ ಶೃಂಗಸಭೆ'ಗಾಗಿ ಉಕ್ರೇನ್‌ನ ಯೋಜನೆಯನ್ನು ತಿಳಿಸಿದ್ದಾರೆ. ಭಾರತ-ಉಕ್ರೇನ್ ಅಂತರ-ಸರ್ಕಾರಿ ಆಯೋಗದ ಮೊದಲ ಸಭೆಯನ್ನು ಶೀಘ್ರದಲ್ಲೇ ನಡೆಸಲು ನಾವು ಒಪ್ಪಿಕೊಂಡಿದ್ದೇವೆ ಎಂದು ಕುಲೇಬಾ ಹೇಳಿದ್ದಾರೆ.

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಯುದ್ಧದ ಅಪರಾಧಗಳಿಗೆ ಕಾರಣರಾದವರನ್ನು ಶಿಕ್ಷಿಸುವುದು, ಉಕ್ರೇನ್‌ನಿಂದ ಎಲ್ಲಾ ರಷ್ಯಾದ ಸೈನ್ಯವನ್ನು ಹಿಂತೆಗೆದುಕೊಳ್ಳುವುದು ಮತ್ತು ತನ್ನ ದೇಶದ ಪ್ರಾದೇಶಿಕ ಸಮಗ್ರತೆಯನ್ನು ಮರುಸ್ಥಾಪಿಸುವುದು ಸೇರಿದಂತೆ ಸಂಘರ್ಷವನ್ನು ಕೊನೆಗೊಳಿಸಲು 10 ಅಂಶಗಳ "ಶಾಂತಿ ಯೋಜನೆಯನ್ನು ಮುಂದಿಟ್ಟಿದ್ದಾರೆ. ಈ ಯೋಜನೆಯಡಿ ಇಂಧನ ಭದ್ರತೆ, ಆಹಾರ ಭದ್ರತೆ ಮತ್ತು ಪರಮಾಣು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅವರು ಕರೆ ನೀಡಿದರು.

SCROLL FOR NEXT