ದೇಶ

ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ರಾಮ ಮಂದಿರ ಉದ್ಘಾಟಿಸಬೇಕು: ಉದ್ಧವ್ ಠಾಕ್ರೆ ಆಗ್ರಹ

Lingaraj Badiger

ಮುಂಬೈ: ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೆರವೇರಿಸಬೇಕು ಎಂದು ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಶನಿವಾರ ಒತ್ತಾಯಿಸಿದ್ದಾರೆ. ಏಕೆಂದರೆ ಇದು "ರಾಷ್ಟ್ರೀಯ ಹೆಮ್ಮೆಯ ವಿಷಯ ಮತ್ತು ದೇಶದ ಸ್ವಾಭಿಮಾನ" ಎಂದು ಮಹಾರಾಷ್ಟ್ರ ಮಾಜಿ ಸಿಎಂ ಹೇಳಿದ್ದಾರೆ.

ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಠಾಕ್ರೆ, ಜನವರಿ 22 ರಂದು ಅಯೋಧ್ಯೆ ದೇವಾಲಯದ ಉದ್ಘಾಟನೆಯ ದಿನ ಮುರ್ಮು ಅವರನ್ನು ನಾಸಿಕ್‌ನ ಕಲಾರಾಮ್ ದೇವಾಲಯಕ್ಕೆ ಆಹ್ವಾನಿಸುತ್ತೇವೆ ಎಂದು ತಿಳಿಸಿದ್ದಾರೆ.

ಜನವರಿ 22 ರಂದು ನಮ್ಮ ಪಕ್ಷದ ಮುಖಂಡರು ಮತ್ತು ಪದಾಧಿಕಾರಿಗಳೊಂದಿಗೆ ನಾಸಿಕ್‌ನ ಐತಿಹಾಸಿಕ ಕಲಾರಾಮ್ ದೇವಾಲಯಕ್ಕೆ ಭೇಟಿ ನೀಡಿ, ಗೋದಾವರಿ ನದಿಯ ದಡದಲ್ಲಿ 'ಮಹಾ ಆರತಿ' ಮಾಡುವುದಾಗಿ ಠಾಕ್ರೆ ಈ ಹಿಂದೆ ಘೋಷಿಸಿದ್ದರು.

ಒಂದು ದಿನದ ನಂತರ, ಅಂದರೆ ಜನವರಿ 23 ರಂದು ಶಿವಸೇನೆ ನಾಸಿಕ್‌ನಲ್ಲಿ ಪಕ್ಷದ ಪದಾಧಿಕಾರಿಗಳ ಸಮಾವೇಶವನ್ನು ಸಹ ನಡೆಸಲಿದೆ, ಅಲ್ಲಿ ಠಾಕ್ರೆ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಗುಜರಾತ್‌ನ ಸೋಮನಾಥ ದೇವಾಲಯವನ್ನು ಪುನಃಸ್ಥಾಪಿಸಿದ ನಂತರ, ದೇಶದ ಮೊದಲ ರಾಷ್ಟ್ರಪತಿ ಡಾ ರಾಜೇಂದ್ರ ಪ್ರಸಾದ್ ಅವರು ಜೀರ್ಣೋದ್ಧಾರ ಸಮಾರಂಭವನ್ನು ಉದ್ಘಾಟಿಸಿದ್ದರು ಎಂದು ಠಾಕ್ರೆ ನೆನಪಿಸಿಕೊಂಡರು.

"ಇದು (ಅಯೋಧ್ಯೆ ರಾಮ ಮಂದಿರ) ರಾಷ್ಟ್ರೀಯ ಹೆಮ್ಮೆಯ ವಿಷಯವಾಗಿರುವುದರಿಂದ ಮತ್ತು ದೇಶದ ಸ್ವಾಭಿಮಾನಕ್ಕೆ ಸಂಬಂಧಿಸಿದ ವಿಚಾರವಾಗಿರುವುದರಿಂದ ರಾಷ್ಟ್ರಪತಿ ಮುರ್ಮು ಅವರಿಂದ ರಾಮಲಲ್ಲಾ ಪ್ರತಿಷ್ಠಾಪನೆ ಸಮಾರಂಭವನ್ನು ಉದ್ಘಾಟಿಸಬೇಕು" ಎಂದು ಠಾಕ್ರೆ ಹೇಳಿದರು.

ರಾಮಮಂದಿರ ಟ್ರಸ್ಟ್ ಪ್ರತಿನಿಧಿಸುವ ನಿಯೋಗ ಶುಕ್ರವಾರ ರಾಷ್ಟ್ರಪತಿ ಮುರ್ಮು ಅವರನ್ನು ಭೇಟಿ ಮಾಡಿ ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ.

SCROLL FOR NEXT