ಲಕ್ನೋ: ಸೋಮವಾರದಂದು ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆ ನಡೆಯಲಿದೆ, ಅದಕ್ಕೆ ಮುಂಚಿತವಾಗಿ, ಶುಕ್ರವಾರದಂದು ಹೊಸ ರಾಮ ಲಲ್ಲಾ ವಿಗ್ರಹದ ಪೂರ್ಣ ಮುಖದ ಮೊದಲ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತು.
ವೈರಲ್ ಆಗಿರುವ ಚಿತ್ರವು ವಿಗ್ರಹ ಕೆತ್ತನೆಯ ಸ್ಥಳದಲ್ಲಿ ತೆಗೆದಂತಿತ್ತು, ಏಕೆಂದರೆ ಆ ಫೋಟೋದಲ್ಲಿ ವಿಗ್ರಹದ ಕಣ್ಣಿಗೆ ಪಟ್ಟಿ ಕಟ್ಟಲಾಗಿತ್ತು. ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ರಾಮಲಲ್ಲಾನ ವಿಗ್ರಹವು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೆ ಅಂತಿಮ ಆಯ್ಕೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿ 51 ಇಂಚಿನ ಶ್ಯಾಮಲ ಮೂರ್ತಿ ರಾಮಲಲ್ಲಾನ ಪೂರ್ಣ ವಿಗ್ರಹವನ್ನು ಶುಕ್ರವಾರ ಪೂಜಾ ವಿಧಿ ವಿಧಾನಗಳ ಮೂಲಕ ಅನಾವರಣಗೊಳಿಸಲಾಗಿದೆ. ಮಂದಸ್ಮಿತ, ಕಮಲವದನನಾಗಿ ಕಂಗೊಳಿಸುತ್ತಿರುವ ಬಾಲರಾಮನ ವಿಗ್ರಹ ಭಕ್ತರ ಮನಸೂರೆಗೊಳ್ಳುತ್ತಿದೆ.
ಕೃಷ್ಣಶಿಲೆಯಲ್ಲಿ ಕೆತ್ತನೆ ಮಾಡಲಾಗಿರುವ 51 ಇಂಚು ಎತ್ತರದ ವಿಗ್ರಹವನ್ನು ಗುರುವಾರ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ ಹಳದಿ ಮತ್ತು ಬಿಳಿ ವಸ್ತ್ರಗಳಿಂದ ಮುಚ್ಚ ಲಾಗಿತ್ತು. ಒಂದೊಂದೇ ಪೂಜಾ ವಿಧಿಗಳನ್ನು ನೆರವೇರಿಸಿ ನಂತರ ವಿಗ್ರಹವನ್ನು ಸಂಪೂರ್ಣ ಅನಾವರಣ ಮಾಡ ಲಾಗಿದೆ. ಶುಕ್ರವಾರ ಪೂಜೆಗಳ ಬಳಿಕ ಕಡೆಯಲ್ಲಿ ಕೇಸರಿ ಮತ್ತು ಧಾನ್ಯದಲ್ಲಿ ಮುಳುಗಿಸುವ ವಿಧಿಯನ್ನೂ ಅನು ಸರಿಸಲಾಗಿದೆ. ಬಾಲರಾಮನು ನಿಂತಿರುವ ಭಂಗಿ ಯಲ್ಲಿರುವ ವಿಗ್ರಹವು ಪ್ರಭಾವಳಿಯನ್ನೂ ಹೊಂದಿದೆ. ರಾಮನ ಪಾದದ ಕೆಳಗೆ ದೇವತಾ ಮಂಡಲ, ಪಾಣಿಪೀಠ, ಸಹಸ್ರದಳ ಕಮಲದ ವಿನ್ಯಾಸವೂ ಇದೆ.
ಇದನ್ನೂ ಓದಿ: ಸಾವಿರ ವರ್ಷ ಕಳೆದರೂ ಇನ್ನೆಂದೂ ವಿವಾದವಾಗದು: ರಾಮಮಂದಿರದ ಕೆಳಗೆ 2 ಸಾವಿರ ಅಡಿಯಲ್ಲಿ 'ಟೈಮ್ ಕ್ಯಾಪ್ಸುಲ್'; ಏನಿದರ ವಿಶೇಷತೆ?
ಜನವರಿ 22 ರ ಮಹಾಮಸ್ತಕಾಭಿಷೇಕದ ಪೂರ್ವಭಾವಿಯಾಗಿ ನಡೆಯುತ್ತಿರುವ ಒಂದು ವಾರದ ಆಚರಣೆಗಳು ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟವು. ಇನ್ನು ಮೂರು ದಿನಗಳು ಬಾಕಿ ಇರುವಾಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅಯೋಧ್ಯೆ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಸಿದ್ಧತೆಗಳ ಪರಿಶೀಲನೆ ನಡೆಸಿದರು.
ಅಯೋಧ್ಯೆಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ರಾಸಾಯನಿಕ, ಜೈವಿಕ, ವಿಕಿರಣ ಮತ್ತು ಪರಮಾಣು ದಾಳಿಗಳನ್ನು ನಿಭಾಯಿಸಲು ತರಬೇತಿ ಪಡೆದ NDRF ನ ಬಹು ತಂಡಗಳನ್ನು ನಿಯೋಜಿಸಲಾಗಿದೆ.