ದೇಶ

ಕ್ಯಾನ್ಸರ್ ಗುಣಮುಖವಾಗುತ್ತೆ ಎಂದು ಗಂಗೆಯಲ್ಲಿ ಮುಳುಗಿಸಿದ 5 ವರ್ಷದ ಬಾಲಕನ ಸಾವು!

Srinivasamurthy VN

ಡೆಹ್ರಾಡೂನ್: ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ ಪೋಷಕರ ಮೂಢನಂಬಿಕೆ ಮತ್ತು ಅಂಧಃ ಶ್ರದ್ಧೆಗೆ ಪುಟ್ಟ ಮಗುವೊಂದು ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ.

ಮೂಢನಂಬಿಕೆ ಮತ್ತು ಪವಾಡ ನಡೆಯುತ್ತದೆ ಎಂಬ ಅತೀವ ಮತ್ತು ಅಂಧ ನಂಬಿಕೆ ಐದು ವರ್ಷದ ಬಾಲಕನ ದುರಂತ ಸಾವಿಗೆ ಕಾರಣವಾಗಿರುವ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ. ಗಂಗಾ ನದಿಯಲ್ಲಿ ಮುಳುಗಿಸಿದರೆ ರೋಗ ಗುಣಮುಖವಾಗುತ್ತದೆ ಎಂಬ ಅಂಧ ನಂಬಿಕೆಯಿಂದ ಪೋಷಕರು ತಮ್ಮದೇ 5 ವರ್ಷದ ಪುಟ್ಟಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಂದು ಹಾಕಿದ್ದಾರೆ.

ಮೂಲಗಳ ಪ್ರಕಾರ ಮೃತ ಬಾಲಕ ಲುಕೇಮಿಯಾ (ರಕ್ತದ ಕ್ಯಾನ್ಸರ್) ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದ್ದು, ಗಂಗಾ ನದಿಯ ನೀರು ರೋಗ ವಾಸಿ ಮಾಡುತ್ತದೆ ಎಂದು ಪಾಲಕರು ನಂಬಿದ್ದರು. ಆದರೆ, ಉತ್ತರ ಭಾರತದಲ್ಲಿ ಚಳಿಯ ಅಬ್ಬರ ಭೀಕರವಾಗಿದ್ದು, ಮಂಜುಗೆಡ್ಡೆಯಷ್ಟು ತಣ್ಣನೆಯ ನೀರಿನಲ್ಲಿ ಮುಳುಗಿಸಿದ
ಪರಿಣಾಮ ಬಾಲಕ ಕೊನೆಯುಸಿರೆಳೆದಿದ್ದಾನೆ. ಪ್ರಾಣ ಉಳಿಸುವ ಪಾಲಕರ ಯತ್ನ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಬಾಲಕನ ಕುಟುಂಬ ದೆಹಲಿಯಲ್ಲಿ ವಾಸಿಸುತ್ತಿದೆ. ನಿನ್ನೆ 9ಗಂಟೆ ಸುಮಾರಿಗೆ ಹರಿದ್ವಾರಕ್ಕೆ ಹೋಗಿದ್ದರು. ಮಗುವಿನೊಂದಿಗೆ ಪಾಲಕರು ಮತ್ತು ಇನ್ನೊಬ್ಬ ಮಹಿಳಾ ಸಂಬಂಧಿ ಇದ್ದರು. ಬಾಲಕನ ಆರೋಗ್ಯ ಕೆಟ್ಟಿತ್ತು. ಅತ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ದೆಹಲಿಯ ವೈದ್ಯರು ಸಹ ಆತ ಬದುಕುವುದಿಲ್ಲ ಎಂದು ಹೇಳಿದ್ದರು ಎಂದು ಪೋಷಕರು ಹೇಳಿದ್ದರು. ಹೀಗಾಗಿ ಆತನನ್ನು ಗಂಗೆಯಲ್ಲಿ ಸ್ನಾನ ಮಾಡಿಸಲು ಕರೆತಂದೆವು ಎಂದು ಕ್ಯಾಬ್ ಚಾಲಕ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಭಾರತ-ಮಾಲ್ಡೀವ್ಸ್ ವಿವಾದ: ಲಕ್ಷದ್ವೀಪದಲ್ಲಿ ಅಭಿವೃದ್ಧಿ ಯೋಜನೆಗೆ 200 ಕೋಟಿ ರೂ. ಅನುಮೋದನೆ ನೀಡಿದ ಕೇಂದ್ರ ಸರ್ಕಾರ!
 
ಬಾಲಕನ ಪಾಲಕರು ಗಂಗಾ ನದಿಯಲ್ಲಿ ಪ್ರಾರ್ಥನೆ ಮಾಡುತ್ತಿರುವಾಗ ಬಾಲಕನ ಚಿಕ್ಕಮ್ಮ ಮಗುವನ್ನು ನೀರಿನಲ್ಲಿ ಮುಳುಗಿಸಿದ್ದಾರೆ. ಬಾಲಕನನ್ನು ನೀರಿನ ಅಡಿಯಲ್ಲಿ ತುಂಬಾ ಹೊತ್ತು ಇರಿಸಿದ್ದನ್ನು ಗಮನಿಸಿ, ಅಲ್ಲಿಯೇ ಇದ್ದ ಕೆಲವರು ಕೂಡಲೇ ಈ ಆಚರಣೆ ನಿಲ್ಲಿಸುವಂತೆ ಕೇಳಿದ್ದಾರೆ. ಆದರೆ, ನೀರಿನಿಂದ ಹೊರ ತೆಗೆಯಲು ಪಾಲಕರು ನಿರಾಕರಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಜಮಾಯಿಸಿದ ಜನರು ಬಲವಂತವಾಗಿ ಬಾಲಕನನ್ನು ಹೊರಗೆ ತೆಗೆದರು. ಈ ವೇಳೆ ಬಾಲಕನ ಚಿಕ್ಕಮ್ಮ ಕೂಗಾಡಿ ದಾಳಿ ಮಾಡಲು ಯತ್ನಿಸಿದರು. ಆದರೆ, ಬಾಲಕನನ್ನು ಮೇಲೆತ್ತಿ ಆಸ್ಪತ್ರೆಗೆ ಸಾಗಿಸಲಾಯಿತು. ಬಾಲಕನನ್ನು ಪರೀಕ್ಷಿಸಿದ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ಘೋಷಿಸಿದರು. ಇಷ್ಟೆಲ್ಲ ಅದರೂ ಬಾಲಕನ ಚಿಕ್ಕಮ್ಮ ಮೃತದೇಹದ ಪಕ್ಕದಲ್ಲಿ ಕುಳಿತು ಮಗು ಮತ್ತೆ ಬದುಕುವುದು ಖಚಿತ ಎಂದು ಹೇಳುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಹರಿದ್ವಾರ ನಗರ ಪೊಲೀಸ್ ಮುಖ್ಯಸ್ಥ ಸ್ವತಂತ್ರ ಕುಮಾರ್ ಬಾಲಕ ದೆಹಲಿಯ ಉನ್ನತ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದ.  ಈ ಕುರಿತು ಪೋಷಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪಾಲಕರು ಮತ್ತು ಬಾಲಕನ ಚಿಕ್ಕಮ್ಮನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ತಿಳಿಸಿದ್ದಾರೆ. 
 

SCROLL FOR NEXT