ದೇಶ

ಬಿಹಾರ ರಾಜಕೀಯ ಬಿಕ್ಕಟ್ಟು: ರಾಜಭವನಕ್ಕೆ ಸಿಎಂ ನಿತೀಶ್ ಕುಮಾರ್ ಭೇಟಿ, ಡಿಸಿಎಂ ತೇಜಸ್ವಿ ಗೈರು

Lingaraj Badiger

ಪಾಟ್ನಾ: ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ಪತನಗೊಳ್ಳಲಿದೆ ಎಂಬ ವರದಿಗಳ ನಡುವೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶುಕ್ರವಾರ ರಾಜಭವನದಲ್ಲಿ ನಡೆದ ಹೈ ಟೀ ಸಮಾರಂಭದಲ್ಲಿ ಭಾಗವಹಿಸಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಗೈರುಹಾಜರಾಗಿದ್ದರು.

ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರು ಮಹಾಘಟಬಂಧನ್‌ನಿಂದ ಹೊರಬಂದು ಬಿಜೆಪಿ ನೇತೃತ್ವದ ಎನ್‌ಡಿಎಗೆ ಮರಳಬಹುದು ಎಂಬ ಊಹಾಪೋಹಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಬಿಹಾರದಲ್ಲಿ ಆಡಳಿತಾರೂಢ ಜೆಡಿ(ಯು)-ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಯ ಅನಿಶ್ಚಿತತೆಯ ನಡುವೆ ನಿತೀಶ್ ಕುಮಾರ್ ಅವರು ಬಿಜೆಪಿ ಬೆಂಬಲದೊಂದಿಗೆ ಭಾನುವಾರ ಮತ್ತೊಮ್ಮೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವುದು ಬಹುತೇಕ ಖಚಿತ ಎಂದು ಮೂಲಗಳು ಹೇಳುತ್ತಿವೆ.

ಜೆಡಿಯು ಮೂಲಗಳ ಪ್ರಕಾರ ಸುಶೀಲ್ ಕುಮಾರ್ ಮೋದಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಭಾನುವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಆರ್‌ಜೆಡಿ ಮತ್ತು ಜೆಡಿಯು ಗುರುವಾರ ಪ್ರತ್ಯೇಕವಾಗಿ ಸಭೆಗಳನ್ನು ನಡೆಸಿದರೆ, ಬಿಜೆಪಿ ರಾಜ್ಯಾಧ್ಯಕ್ಷ ಸಾಮ್ರಾಟ್ ಚೌಧರಿ ದೆಹಲಿಗೆ ತೆರಳಿ ಬಿಜೆಪಿಯ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರಿಗೆ ಬಿಜೆಪಿಯ ಮಾಜಿ ಉಪಮುಖ್ಯಮಂತ್ರಿ ರೇಣುದೇವಿ ಅವರು ಸಾಥ್ ನೀಡಿದ್ದರು.

SCROLL FOR NEXT