ದೇಶ

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಮತ್ತಿಬ್ಬರು ಬಲಿ, ಮೂವರಿಗೆ ಗಾಯ

Manjula VN

ಗುವಾಹಟಿ: ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದ್ದು, ಬಂಡುಕೋರರು ಮತ್ತು ಗ್ರಾಮಸ್ಥರ ನಡುವೆ ನಡೆದಿರುವ ಗುಂಡಿನ ಕಾಳಗದಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟು, ಮೂವರಿಗೆ ಗಾಯವಾಗಿರುವ ಘಟನೆ ಮಂಗಳವಾರ ನಡೆದಿದೆ.

ಪಶ್ಚಿಮ ಇಂಫಾಲ್‌ ಮತ್ತು ಕಂಗ್‌ಪೋಕ್ಪಿ ಜಿಲ್ಲೆಯ ಗಡಿಯಲ್ಲಿರುವ ಕಡಂಗ್‌ಬಂದ್‌ ಗ್ರಾಮದಲ್ಲಿರುವ ಶಿಬಿರದಲ್ಲಿ ಈ ಘಟನೆ ನಡೆದಿದೆ, ಮೃತರನ್ನು ಎನ್‌.ಮೈಕೆಲ್ (33) ಹಾಗೂ ಎಂ.ಖಾಬಾ(23) ಎಂದು ಗುರುತಿಸಲಾಗಿದೆ.

‘ಶಿಬಿರದ ಮೇಲೆ ಬಂಡುಕೋರರು ದಾಳಿ ನಡೆಸಿದರು. ಗ್ರಾಮಸ್ಥರು ಪ್ರತಿದಾಳಿ ಆರಂಭಿಸಿದ ವೇಳೆ ಗುಂಡಿನ ಕಾಳಗ ನಡೆದಿದೆ. ಈ ವೇಳೆ ಬಂಡುಕೋರರು ತಮ್ಮ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆಂದು ಪೊಲೀಸರು ಹೇಳಿದ್ದಾರೆ.

ಗುಂಡಿನ ಕಾಳಗ ಆರಂಭಗೊಂಡ ಬೆನ್ನಲ್ಲೇ, ಭೀತರಾದ ಮಹಿಳೆಯರು, ಮಕ್ಕಳು ಹಾಗೂ ವಯಸ್ಸಾದವರು ಗ್ರಾಮವನ್ನು ತೊರೆದು, ನೆರೆಯ ಗ್ರಾಮ ಕೌತ್ರುಕ್‌ನತ್ತ ಓಡಿ ಹೋದರು ಎಂದು ತಿಳಿಸಿದ್ದಾರೆ.

ಸ್ಥಳಕ್ಕೆ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ಕಳುಹಿಸಲಾಗಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.

ಏತನ್ಮಧ್ಯೆ ಇಬ್ಬರು ಸಚಿವರು ಸೇರಿದಂತೆ ರಾಜ್ಯದ ಎಲ್ಲ 10 ಮಂದಿ ಕುಕಿ ಶಾಸಕರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಸಂವಿಧಾನದ ನಿಬಂಧನೆಗಳಿಗೆ ಅನುಸಾರವಾಗಿ ಕುಕಿ-ಝೊ ಬುಡಕಟ್ಟು ಪ್ರದೇಶಕ್ಕೆ ಪ್ರತ್ಯೇಕ ಆಡಳಿತ ವ್ಯವಸ್ಥೆ ರೂಪಿಸುವಂತೆ ಆಗ್ರಹಿಸಿದ್ದಾರೆ.

SCROLL FOR NEXT