ದೇಶ

ವಿಮಾನದಲ್ಲಿ ಸಾಕು ಪ್ರಾಣಿಗೆ ಸೂಕ್ತ ವ್ಯವಸ್ಥೆ ಸಿಗದೇ ಪರದಾಟ: ಪ್ರಯಾಣಿಕನ ಆಕ್ರೋಶ

Srinivas Rao BV

ಬೆಂಗಳೂರು: ಬೆಂಗಳೂರು ಮೂಲದ ಮಾರ್ಕೆಟಿಂಗ್ ಕ್ಷೇತ್ರದಲ್ಲಿರುವ ವೃತ್ತಿಪರ ವ್ಯಕ್ತಿಯೋರ್ವರು ತಮ್ಮ ಸಾಕು ಪ್ರಾಣಿಗೆ ಸೂಕ್ತ ವ್ಯವಸ್ಥೆ ಸಿಗದೇ ಪರದಾಡಿದ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

ಪಾಠಕ್ ಎಂಬ ವ್ಯಕ್ತಿ ಜ.26 ರಂದು ಪತ್ನಿ ಹಾಗೂ ಸಾಕು ನಾಯಿ ಶಿ-ಟ್ಜು ಜೊತೆಗೆ ಅಹ್ಮದಾಬಾದ್ ನಿಂದ ಬೆಂಗಳೂರಿಗೆ QP1332 ವಿಮಾನದಲ್ಲಿ ಪ್ರಯಾಣಿಸಿದ್ದರು. ಸಾಕು ಪ್ರಾಣಿಯನ್ನು ಕರೆದೊಯ್ಯಲು 5,000 ರೂಪಾಯಿ ಶುಲ್ಕ ವಿಧಿಸಲಾಗಿತ್ತಾದರೂ ಅದಕ್ಕೆ ತಕ್ಕ ವ್ಯವಸ್ಥೆಗಳನ್ನು ವಿಮಾನಯಾನ ಸಂಸ್ಥೆ ಒದಗಿಸಿಲ್ಲ, ಪರಿಣಾಮ ಪ್ರಯಾಣದ ಅನುಭವ ಕೆಟ್ಟದಾಗಿತ್ತು ಎಂದು ಪಾಠಕ್ ಆರೋಪಿಸಿದ್ದಾರೆ.

ನಿಗದಿತ ಸಮಯಕ್ಕೂ 3 ಗಂಟೆಗಳ ಮಂಚೆಯೇ ವಿಮಾನ ಲ್ಯಾಂಡ್ ಆಯಿತು. ಪರಿಣಾಮ ವಿಮಾನ ನಿಲ್ದಾಣದಲ್ಲಿ 6 ಗಂಟೆಗಳ ಕಾಲ ಸಾಕು ಪ್ರಾಣಿಯೊಂದಿಗೆ ಕಳೆಯಬೇಕಾಯಿತು. ವಿಮಾನ ನಿಲ್ದಾಣದಲ್ಲಿನ ಗ್ರೌಂಡ್ ಸ್ಟಾಫ್ ಮತ್ತು ಸಿಐಎಸ್‌ಎಫ್ ಸಿಬ್ಬಂದಿ ಸುದೀರ್ಘ ಕಾಯುವಿಕೆ ವೇಳೆ ಒಮ್ಮೆಯೂ ಸಾಕುಪ್ರಾಣಿಯನ್ನು ಕಂಟೇನರ್‌ನಿಂದ ಹೊರಗೆ ಬಿಡಲಿಲ್ಲ, ಟರ್ಮಿನಲ್‌ನಿಂದ ಹೊರಹೋಗಲು ಮತ್ತು ಹಿಂತಿರುಗಲು ಅನುಕೂಲ ಮಾಡಿಕೊಡಲಿಲ್ಲ ಎಂದು ಪ್ರಯಾಣಿಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದಷ್ಟೇ ಅಲ್ಲದೇ ವಿಮಾನದಲ್ಲಿ ಸಾಕುನಾಯಿಗೆ ವಿಶೇಷ ಆಸನವನ್ನು ಕಲ್ಪಿಸದೇ ಕಾಲಿನ ಅಡಿಯಲ್ಲಿ ಕಂಟೇನರ್ ನ್ನು ಇಡುವಂತೆ ಸಿಬ್ಬಂದಿ ಸೂಚಿಸಿದ್ದರು. ವಿಮಾನ ಏರುವ ಪ್ರಕ್ರಿಯೆ 40 ನಿಮಿಷ ತೆಗೆದುಕೊಂಡಿತು. ಹವಾನಿಯಂತ್ರಿತ ವ್ಯವಸ್ಥೆಯೂ ಇರದ ಪರಿಣಾಮ ತೀವ್ರ ಸಮಸ್ಯೆಯಾಯಿತು. ಇದರಿಂದ ಹಿಂಸೆಗೊಳಗಾದ ನಾಯಿಯನ್ನು ಸಮಾಧಾನ ಮಾಡಲು ಕಂಟೇನರ್ ನ್ನು ತೊಡೆಯ ಮೇಲೆ ಇಟ್ಟುಕೊಳ್ಳಬೇಕಾಯಿತು. ಆದರೆ ಈ ಸಮಸ್ಯೆಯನ್ನು ಕ್ಯಾಪ್ಟನ್‌ಗೆ ತಿಳಿಸಿದರೆ, ವಿಮಾನ ಹಿಂತಿರುಗಿಸಬೇಕಾಗುತ್ತದೆ ಎಂದು ವ್ಯವಸ್ಥಾಪಕರು ತಮಗೆ ಬೆದರಿಕೆ ಹಾಕುತ್ತಿದ್ದರು ಎಂದು ಪ್ರಯಾಣಿಕ ಆರೋಪಿಸಿದ್ದಾರೆ.

ಆದರೆ ಪ್ರಯಾಣಿಕನ ಆರೋಪಗಳನ್ನು ತಳ್ಳಿಹಾಕಿರುವ ವಿಮಾನ ಸಂಸ್ಥೆ ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಉತ್ತಮ ಪ್ರೋಟೋಕಾಲ್‌ ನೊಂದಿಗೆ ಇದುವರೆಗೆ 2,500 ಸಾಕುಪ್ರಾಣಿಗಳು ವಿಮಾನದಲ್ಲಿ ಪ್ರಯಾಣಿಸಿವೆ ಎಂದು ಆಕಾಶ ಏರ್‌ನ ಹೇಳಿಕೆ ತಿಳಿಸಿದೆ.

"ವಿಮಾನ ಟೇಕ್ ಆಫ್ ಸಮಯ ರಾತ್ರಿ 10.30ಕ್ಕೆ ಇತ್ತು. ಆದರೆ ಬದಲಾದ ಸಮಯವನ್ನು ಪ್ರಯಾಣಿಕರಿಗೆ 12 ಗಂಟೆಗಳ ಮುಂಚಿತವಾಗಿ ತಿಳಿಸಲಾಯಿತು" ಎಂದು ವಿಮಾನಯಾನ ಸಂಸ್ಥೆ ಹೇಳಿದೆ. ಪ್ರಯಾಣಿಕರಿಗೆ ತಮ್ಮ ಸಾಕು ನಾಯಿಯನ್ನು ಟರ್ಮಿನಲ್‌ನ ಹೊರಗೆ ತೆಗೆದುಕೊಂಡು ಹಿಂತಿರುಗುವ ಆಯ್ಕೆಯನ್ನು ನೀಡಲಾಯಿತು, ಆದರೆ ಭದ್ರತಾ ತಪಾಸಣೆಗಳನ್ನು ಪುನರಾವರ್ತಿಸಬೇಕಾಗಿರುವುದರಿಂದ ಅವರು ಹಾಗೆ ಮಾಡಲು ನಿರಾಕರಿಸಿದರು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

SCROLL FOR NEXT