ಲಖನೌ/ಹತ್ರಾಸ್: ಹತ್ರಾಸ್ ಸತ್ಸಂಗದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. ಇನ್ನು ಆಯೋಜಕರು ಸಾಕ್ಷ್ಯಗಳನ್ನು ಮರೆಮಾಚಿದ್ದಾರೆ ಮತ್ತು ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಕೇವಲ 80,000 ಜನರಿಗೆ ಮಾತ್ರ ಅವಕಾಶವಿದ್ದ ಸ್ಥಳದಲ್ಲಿ 2.5 ಲಕ್ಷ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ. ಹತ್ರಾಸ್ ಜಿಲ್ಲಾಡಳಿತವು ಎಫ್‌ಐಆರ್‌ನಲ್ಲಿ ಮುಖ್ಯ ಆಯೋಜಕ ದೇವಪ್ರಕಾಶ್ ಮಧುಕರ್ ಸೇರಿದಂತೆ ಸಂಘಟಕರು ಹಾಗೂ ಭೋಲೆ ಬಾಬಾ ಬಾಡಿಗಾರ್ಡ್ ಗಳು ಹಾಗೂ ಹಲವಾರು ಪ್ರಮುಖ ವ್ಯಕ್ತಿಗಳ ವಿರುದ್ಧ ಆರೋಪ ಹೊರಿಸಿದೆ. ಪ್ರಕರಣದ ಕುರಿತಂತೆ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 105, 110, 126 (2), 223ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಸತ್ಸಂಗದ ಬಳಿಕ ಭೋಲೆ ಬಾಬಾರ ಆಶೀರ್ವಾದ ಪಡೆಯಲು ಭಕ್ತರು ಧಾವಿಸಿದ್ದರು. ಈ ವೇಳೆ ಅಂಗರಕ್ಷಕರು ಭಕ್ತರನ್ನು ತಡೆದಿದ್ದರ ಪರಿಣಾಮ ಒಬ್ಬರ ಮೇಲೊಬ್ಬರು ಬೀಳಲು ಕಾರಣವಾಯಿತು. ಇದರಿಂದಾಗಿ ನೂರಾರು ಜನರು ಜೀವ ಕಳೆದುಕೊಂಡರು ಎಂದು ಎಫ್ಐಆರ್ ನಲ್ಲಿ ವಿವರಿಸಲಾಗಿದೆ. ಯುಪಿ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್ ಕೂಡ ಸ್ಥಳದಲ್ಲಿ ಜನದಟ್ಟಣೆ ದುರಂತಕ್ಕೆ ಕಾರಣ ಎಂದು ಖಚಿತಪಡಿಸಿದ್ದಾರೆ.
ಎಫ್‌ಐಆರ್‌ನಲ್ಲಿ ದೇವಮಾನವ ಭೋಲೆ ಬಾಬಾ ಹೆಸರಿಲ್ಲ. ಆದಾಗ್ಯೂ, ಪೊಲೀಸರು ಭೋಲೆ ಬಾಬಾನಿಗಾಗಿ ಶೋಧ ನಡೆಸುತ್ತಿದ್ದಾರೆ. ಹತ್ರಾಸ್ ಪಟ್ಟಣದಿಂದ ಸುಮಾರು 47 ಕಿಮೀ ದೂರದಲ್ಲಿರುವ ಫುಲ್ರೈ ಗ್ರಾಮದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಸತ್ತವರಲ್ಲಿ ಬಹುತೇಕ ಮಹಿಳೆಯರೇ ಹೆಚ್ಚಾಗಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ. ಹತ್ರಾಸ್ ಕಾಲ್ತುಳಿತದ ತನಿಖೆಯಲ್ಲಿ ನಿವೃತ್ತ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳು ನ್ಯಾಯಾಂಗ ತನಿಖಾ ಸಮಿತಿಯ ಭಾಗವಾಗಿರುತ್ತಾರೆ ಎಂದು ಅವರು ಹೇಳಿದರು.