ಉನ್ನಾವೊ: ಅಕ್ಕಿ ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಗುಡಿಸಲಿನ ಮೇಲೆ ಬಿದ್ದಿದ್ದು, ಗುಡಿಸಲಿನಲ್ಲಿದ್ದ ಮಹಿಳೆ ಮತ್ತು ಆಕೆಯ ಇಬ್ಬರು ಪುತ್ರರು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬೆಹ್ತಾ ಮುಜಾವರ್‌ನಲ್ಲಿ ಗುರುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಕುಟುಂಬ ಗುಡಿಸಲಿನಲ್ಲಿ ವಾಸವಾಗಿತ್ತು ಮತ್ತು ಅದರಲ್ಲಿಯೇ ಸಣ್ಣ ಅಂಗಡಿ ನಡೆಸುತ್ತಿದ್ದರು ಎಂದು ಬಂಗಾರ್‌ಮೌ ವೃತ್ತಾಧಿಕಾರಿ ಅರವಿಂದ್ ಕುಮಾರ್ ಅವರು ತಿಳಿಸಿದ್ದಾರೆ.
ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ನಿದ್ದೆ ಮಾಡುತ್ತಿದ್ದ ಸರಳಾ(35) ಮತ್ತು ಆಕೆಯ ಮಕ್ಕಳಾದ ಕರಣ್(15) ಹಾಗೂ ವಿಕ್ಕಿ (12) ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಸರಳಾ ಅವರ ಪತಿ ರಾಜ್‌ಕುಮಾರ್ ಗುಡಿಸಲಿನ ಹೊರಗೆ ಮಲಗಿದ್ದರು. ಹೀಗಾಗಿ ಅವರು ಬದುಕುಳಿದಿದ್ದಾರೆ.
ಘಟನೆಯ ನಂತರ ಟ್ರಕ್ ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಚಾಲಕನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.