ನವದೆಹಲಿ: ಆಮ್ ಆದ್ಮಿ ಪಕ್ಷದ ಸತ್ಯೇಂದ್ರ ಜೈನ್ ವಿರುದ್ಧ ಲಂಚ ಆರೋಪದ ಪ್ರಕರಣದ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನುಮತಿ ನೀಡಿದ್ದಾರೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನ ಅಧಿಕಾರಿಯೊಬ್ಬರಿಂದ 7 ಕೋಟಿ ರೂಪಾಯಿ ಲಂಚ ಸ್ವೀಕರಿಸಿದ ಆರೋಪ ಸತ್ಯೇಂದ್ರ ಜೈನ್ ವಿರುದ್ಧ ಇದ್ದು, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಈ ಪ್ರಕರಣದ ತನಿಖೆ ನಡೆಸಲಿದೆ.
ಲೆಫ್ಟಿನೆಂಟ್ ಗವರ್ನರ್ ಆದೇಶದ ಪ್ರಕಾರ, ಎಎಪಿ ನಾಯಕನನ್ನು ಭ್ರಷ್ಟಾಚಾರ ತಡೆ ಕಾಯ್ದೆಯಡಿ ತನಿಖೆ ನಡೆಸಲಾಗುತ್ತದೆ. ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸುವ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದ ಬಿಇಎಲ್‌ಗೆ ವಿಧಿಸಲಾಗಿದ್ದ 16 ಕೋಟಿ ರೂ.ಗಳ ದಂಡವನ್ನು ಮನ್ನಾ ಮಾಡಲು ದೆಹಲಿಯ ಮಾಜಿ ಸಚಿವರು ಲಂಚವನ್ನು ಸ್ವೀಕರಿಸಿದ್ದರು. ಯೋಜನೆಯು 571 ಕೋಟಿ ರೂ ಮೊತ್ತದ್ದಾಗಿತ್ತು.
ಎಸಿಬಿಯಿಂದ ಜೈನ್ ವಿರುದ್ಧದ ತನಿಖೆಯನ್ನು ಅನುಮೋದಿಸಲು ಭ್ರಷ್ಟಾಚಾರ ತಡೆ (ಪಿಒಸಿ) ಕಾಯಿದೆ, 1998 ರ ಸೆಕ್ಷನ್ 17 ಎ ಅಡಿಯಲ್ಲಿ ಕೇಂದ್ರ ಗೃಹ ಸಚಿವಾಲಯಕ್ಕೆ ವಿಷಯವನ್ನು ಉಲ್ಲೇಖಿಸಲಾಗಿದ್ದು, ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯದ ಪ್ರಸ್ತಾವನೆಯನ್ನು ಎಲ್‌ಜಿ ಒಪ್ಪಿಗೆ ನೀಡಿದ್ದಾರೆ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಕಚೇರಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.