ಪಾಟ್ನಾ: NEET-UG ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಪಾಟ್ನಾದಲ್ಲಿ ಒಬ್ಬ ಅಭ್ಯರ್ಥಿ ಸೇರಿದಂತೆ ಮತ್ತೆ ಇಬ್ಬರನ್ನು ಬಂಧಿಸಿದೆ. ಇದರೊಂದಿಗೆ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
NEET-UG ಆಕಾಂಕ್ಷಿ ನಳಂದ ಮೂಲದ ಸನ್ನಿ ಮತ್ತು ಗಯಾದಿಂದ ಬಂದ ಇನ್ನೊಬ್ಬ ಅಭ್ಯರ್ಥಿ ರಂಜಿತ್ ಕುಮಾರ್ ಅವರ ತಂದೆಯನ್ನು ಇಂದು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬಿಹಾರದಲ್ಲಿ NEET-UG ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ ಇದುವರೆಗೆ ಎಂಟು ಜನರನ್ನು ಮತ್ತು ಗುಜರಾತ್‌ನ ಲಾತೂರ್ ಹಾಗೂ ಗೋದ್ರಾದಲ್ಲಿ ತಲಾ ಒಬ್ಬರನ್ನು ಮತ್ತು ಸಾಮಾನ್ಯ ಪಿತೂರಿಗೆ ಸಂಬಂಧಿಸಿದಂತೆ ಡೆಹ್ರಾಡೂನ್‌ನಲ್ಲಿ ಒಬ್ಬರನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಹಜಾರಿಬಾಗ್ ಮೂಲದ ಓಯಸಿಸ್ ಶಾಲೆಯ ಪ್ರಾಂಶುಪಾಲರು ಮತ್ತು ಉಪ ಪ್ರಾಂಶುಪಾಲರನ್ನು ಹಾಗೂ NEET ಅಭ್ಯರ್ಥಿಗಳಿಗೆ ಸುರಕ್ಷಿತ ಆವರಣವನ್ನು ಒದಗಿಸಿದ ಇಬ್ಬರು ವ್ಯಕ್ತಿಗಳನ್ನು ಸಿಬಿಐ ಈ ಹಿಂದೆ ಬಂಧಿಸಿತ್ತು. ಅಲ್ಲದೆ ಸುಟ್ಟ ಪ್ರಶ್ನೆಪತ್ರಿಕೆಗಳನ್ನು ಬಿಹಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಆರು ಎಫ್‌ಐಆರ್‌ಗಳನ್ನು ದಾಖಲಿಸಿದೆ.