ನವದೆಹಲಿ: ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡ ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಅವರು ದೆಹಲಿಯ ಲುಟಿಯನ್ಸ್‌ನ 28 ತುಘಲಕ್ ಕ್ರೆಸೆಂಟ್‌ನಲ್ಲಿರುವ ತಮ್ಮ ಅಧಿಕೃತ ಬಂಗಲೆಯನ್ನು ಖಾಲಿ ಮಾಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ಕಿಶೋರಿ ಲಾಲ್ ಶರ್ಮಾ ಅವರ ಎದುರು ಸುಮಾರು 1.5 ಲಕ್ಷ ಮತಗಳ ಅಂತರದಿಂದ ಸೋತಿದ್ದ ಸ್ಮೃತಿ ಇರಾನಿ, ಈ ವಾರದ ಆರಂಭದಲ್ಲಿ ತಮ್ಮ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಅಮೇಥಿಯಿಂದ ಸೋಲಿಸಿದ ನಂತರ ಬಿಜೆಪಿಯಲ್ಲಿ ಪ್ರಬಲ ನಾಯಕಿಯಾಗಿ ಸ್ಮೃತಿ ಇರಾನಿ ಗುರುತಿಸಿಕೊಂಡಿದ್ದರು. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ತಿಂಗಳೊಳಗೆ ಅವರಿಗೆ ನೀಡಲಾದ ಸರ್ಕಾರದ ಅಧಿಕೃತ ಬಂಗಲೆಯನ್ನು ತೆರವು ಮಾಡಬೇಕಾಗಿದೆ.