ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕನಿಷ್ಠ ಏಳು ಕಾಂಗ್ರೆಸ್ ಶಾಸಕರು ಪಕ್ಷದ ನಿರ್ದೇಶನವನ್ನು ಧಿಕ್ಕರಿಸಿ ಅಡ್ಡ ಮತದಾನ ಮಾಡಿದ್ದಾರೆ.
37 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ತನ್ನ ಅಭ್ಯರ್ಥಿ ಪ್ರದೀನ ಸತವ್‌ಗೆ 30 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನಿಗದಿಪಡಿಸಿತ್ತು ಮತ್ತು ಉಳಿದ ಏಳು ಮತಗಳು ಮಿತ್ರ ಪಕ್ಷ ಶಿವಸೇನೆ-ಯುಬಿಟಿಯ ಅಭ್ಯರ್ಥಿ ಮಿಲಿಂದ್ ನಾರ್ವೇಕರ್‌ಗೆ ಹೋಗಬೇಕಾಗಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಆದರೆ ಸತವ್ 25 ಮತ್ತು ನಾರ್ವೇಕರ್ 22 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದಿದ್ದು, ಕನಿಷ್ಠ ಏಳು ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ.
ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿಯ ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು ಸ್ಪರ್ಧಿಸಿದ ಎಲ್ಲಾ ಒಂಬತ್ತು ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಶರದ್ ಪವಾರ್ ನೇತೃತ್ವದ ಎನ್‌ಸಿಪಿ-ಎಸ್‌ಪಿ ಬೆಂಬಲಿತ ರೈತ ಮತ್ತು ಕಾರ್ಮಿಕರ ಪಕ್ಷದ ಜಯಂತ್ ಪಾಟೀಲ್ ಸಹ ಸೋಲು ಅನುಭವಿಸಿದ್ದಾರೆ.
ಬಿಜೆಪಿ ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಅದರ ಮಹಾಯುತಿ ಮಿತ್ರಪಕ್ಷಗಳಾದ ಶಿವಸೇನಾ ಮತ್ತು ಎನ್‌ಸಿಪಿ ತಲಾ ಇಬ್ಬರು ಅಭ್ಯರ್ಥಿಗಳನ್ನು ನಾಮನಿರ್ದೇಶನಗೊಳಿಸಿದ್ದವು. ಮತ್ತೊಂದೆಡೆ, ಕಾಂಗ್ರೆಸ್ ಮತ್ತು ಶಿವಸೇನಾ(ಯುಬಿಟಿ) ತಲಾ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿತು. ಅವರ ಎಂವಿಎ ಪಾಲುದಾರ ಎನ್‌ಸಿಪಿ (ಎಸ್‌ಪಿ), ರೈತ ಮತ್ತು ಕಾರ್ಮಿಕರ ಪಕ್ಷ (ಪಿಡಬ್ಲ್ಯೂಪಿ) ನಾಮನಿರ್ದೇಶಿತರನ್ನು ಬೆಂಬಲಿಸಿದೆ. ಆದರೆ, ಪಿಡಬ್ಲ್ಯುಪಿ ಅಭ್ಯರ್ಥಿ ಜಯಂತ್ ಪಾಟೀಲ್ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ.