ಮುಂಬೈ: ನಿಜವಾಗಿಯೂ ಸಂವಿಧಾನ ಪ್ರೀತಿಸುವುದಾದರೆ ಮನುಸ್ಮೃತಿ ಪ್ರತಿಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ವಂಚಿತ ಬಹುಜನ ಆಘಾಡಿ ಸಂಸ್ಥಾಪಕ ಪ್ರಕಾಶ್ ಅಂಬೇಡ್ಕರ್ ಶನಿವಾರ ಸವಾಲು ಹಾಕಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ನಿಜವಾಗಿಯೂ ಸಂವಿಧಾನ ಪ್ರೀತಿಸುವುದಾದರೆ, ಮನುಸ್ಮೃತಿ ಪ್ರತಿಗಳನ್ನು ಬೆಂಕಿ ಹಚ್ಚಿ ಸುಡುವಂತೆ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅವರನ್ನು ಒತ್ತಾಯಿಸುವುದಾಗಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಮೊಮ್ಮಗ ಹೇಳಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಸಂವಿಧಾನದ ಮೇಲೆ ದಾಳಿ ನಡೆಸಿದ್ದು, ಅವಕಾಶ ವಂಚಿತ ಸಮುದಾಯಗಳನ್ನು ಪದೇ ಪದೇ ಶೋಷಿಸುತ್ತಿವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶ ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಿದ ಮೌಲ್ಯಗಳನ್ನು ಭ್ರಷ್ಟಗೊಳಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಕಾಂಗ್ರೆಸ್ ಬಿಜೆಪಿಯ 'ಎ-ಟೀಮ್' , ಬಿಜೆಪಿ ಹುಟ್ಟಿದ ಆರ್‌ಎಸ್‌ಎಸ್‌ಗೆ ಮೊದಲು ಪ್ರೋತ್ಸಾಹ ನೀಡಿದ್ದೇ ಕಾಂಗ್ರೆಸ್, ಇದೀಗ ಅದು ಬಿಜೆಪಿಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಟೀಕಿಸಿದ್ದಾರೆ.