ನವದೆಹಲಿ: ದೆಹಲಿಯ ಜಿಟಿಬಿ ಆಸ್ಪತ್ರೆಯ ವಾರ್ಡ್‌ನಲ್ಲಿ ಭಾನುವಾರ ಯುವಕನೊಬ್ಬ 32 ವರ್ಷದ ರೋಗಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯಾದ ವ್ಯಕ್ತಿ ರಿಯಾಜುದ್ದೀನ್ ಅವರನ್ನು ಜೂನ್ 23 ರಂದು ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಅವರು ಕಿಬ್ಬೊಟ್ಟೆಯ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆಸ್ಪತ್ರೆಯ ವಾರ್ಡ್ ಸಂಖ್ಯೆ 24 ರಲ್ಲಿ ಈ ಘಟನೆ ನಡೆದಿದ್ದು, 18 ವರ್ಷದ ಯುವಕ ನಡೆಸಿದ ಗುಂಡಿನ ದಾಳಿಯಲ್ಲಿ ರಿಯಾಜುದ್ದೀನ್ ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
"ವಾರ್ಡ್ ನಂ. 24 ರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪಿಸಿಆರ್ ಕರೆಯನ್ನು ಜಿಟಿಬಿ ಎನ್ಕ್ಲೇವ್ ಪೊಲೀಸ್ ಠಾಣೆಯಲ್ಲಿ ಸ್ವೀಕರಿಸಲಾಗಿದೆ" ಎಂದು ಪೊಲೀಸ್ ಉಪ ಆಯುಕ್ತ(ಶಹದಾರ) ಸುರೇಂದ್ರ ಚೌಧರಿ ಹೇಳಿದ್ದಾರೆ.
"ಸ್ಥಳಕ್ಕೆ ತಲುಪಿದಾಗ ಗುಂಡಿನ ದಾಳಿಯಲ್ಲಿ ರಿಯಾಜುದ್ದೀನ್ ಎಂಬ ರೋಗಿ ಗಾಯಗೊಂಡಿರುವುದನ್ನು ಪೊಲೀಸರು ಗಮನಸಿದ್ದಾರೆ. ನಂತರ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು" ಎಂದು ಅವರು ತಿಳಿಸಿದ್ದಾರೆ.
ಇಂದು ಸಂಜೆ 4 ಗಂಟೆ ಸುಮಾರಿಗೆ 18 ವರ್ಷದ ಯುವಕ ವಾರ್ಡ್‌ನೊಳಗೆ ಬಂದು ರಿಯಾಜುದ್ದೀನ್ ಮೇಲೆ ಗುಂಡು ಹಾರಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯ ಬಂಧನಕ್ಕಾಗಿ ತಂಡಗಳನ್ನು ರಚಿಸಲಾಗಿದೆ. ಇದು ವೈಯಕ್ತಿಕ ದ್ವೇಷದಂತಿದೆ" ಎಂದು ಡಿಸಿಪಿ ಹೇಳಿದ್ದಾರೆ.